ಮೀನುಗಾರಿಕೆ ಉದ್ಯಮದಿಂದ ನಿರುದ್ಯೋಗ, ಬಡತನ ನಿರ್ಮೂಲನೆ ಸಾಧ್ಯ: ಶಾಸಕ ಸಿ.ಎಸ್. ನಾಡಗೌಡ
ಮೀನುಗಾರಿಕಾ ಇಲಾಖೆ ನೂತನ ಕಚೇರಿ ಕಟ್ಟಡಕ್ಕೆ
50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣದ ಭೂಮಿ ಪೂಜೆಗೆ ಶಾಸಕ ಸಿ ಎಸ್ ನಾಡಗೌಡ ಚಾಲನೆ.
ಮುದ್ದೇಬಿಹಾಳ: ಮೀನುಗಾರಿಕೆ ಕ್ಷೇತ್ರವು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ನಮ್ಮ ಭಾಗದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳ ಮಧ್ಯೆ ಹರಿಯುವ ಕೃಷ್ಣಾ ನದಿ ತೀರದಲ್ಲಿ ಮೀನುಗಾರಿಕೆಗೆ ವ್ಯಾಪಕ ಅವಕಾಶಗಳಿವೆ. ಯುವಕರು ಈ ಕ್ಷೇತ್ರದಲ್ಲಿ ವೈಜ್ಞಾನಿಕ ತರಬೇತಿ ಪಡೆದುಕೊಂಡರೆ ನಿರುದ್ಯೋಗ ಮತ್ತು ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿದೆ ಎಂದು ಕೆಎಸ್‍ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಮೀನುಗಾರಿಕಾ ಇಲಾಖೆಯ ನೂತನ ಕಚೇರಿ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ದಾಪುರದಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾರಾಯಣಪುರ ಗಡಿ ಭಾಗದ ಸಿದ್ದಾಪುರದಲ್ಲಿ 75 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಮೀನುಮರಿ ಉತ್ಪಾದನಾ ಕೇಂದ್ರಕ್ಕೆ (ಸೀಡ್ ಫಾರ್ಮ್) ಚಾಲನೆ ನೀಡಲಾಗಿತ್ತು. ಅಂದಿನ ಶಾಸಕ ವೆಂಕಟರಾವ ನಾಡಗೌಡರ ಮೂಲಕ 9 ಕೋಟಿ ರೂ. ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕೆಲಸಗಳು ಸಮರ್ಪಕವಾಗಿ ನಡೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಅಗತ್ಯ:
ಸ್ಥಳೀಯವಾಗಿ ಮೀನುಗಾರಿಕೆಯಲ್ಲಿ ಆಸಕ್ತಿ ಕಡಿಮೆಯಿರುವುದರಿಂದ ಆಂಧ್ರ ಮತ್ತು ತಮಿಳುನಾಡಿನ ಮೀನುಗಾರರನ್ನು ಗುತ್ತಿಗೆದಾರರು ಬಳಸಿಕೊಳ್ಳುತ್ತಿದ್ದಾರೆ. ಮೀನುಗಾರರಿಂದ ಕೇವಲ 50-60 ರೂಪಾಯಿಗೆ ಮೀನು ಪಡೆದು ಮಾರುಕಟ್ಟೆಯಲ್ಲಿ 300 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ನಮ್ಮ ಭಾಗದ ಭೂಹೀನರು ಮತ್ತು ಹಿಂದುಳಿದ ವರ್ಗದವರು ಈ ವರದಾನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಭಾಂಗಿ ಮಾತನಾಡಿ, ಜಿ.ಪಂ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣವಾಗುತ್ತಿದ್ದು, ಶಾಸಕರು ಕಾಳಜಿಯಿಂದ ಜಾಗ ಒದಗಿಸಿದ್ದಾರೆ. ಮೀನುಗಾರರಿಗೆ ಲೈಫ್ ಜಾಕೆಟ್, ಬಲೆ ಹಾಗೂ ವಾಹನ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿಶೇಷ ಘಟಕ ಯೋಜನೆಯಡಿ ಫಲಾನುಭವಿ ಶಾಂತಾಬಾಯಿ ಲಮಾಣಿ ಅವರಿಗೆ ‘ಗೂಡ್ಸ್ ಕ್ಯಾಬ್’ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂ.ಬಿ.ನಾವದಗಿ, ಮಾಜಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ರಮೇಶ ಓಸ್ವಾಲ, ಪ್ರಭುರಾಜ ಕಲ್ಬುರ್ಗಿ,ಲ್ಯಾಂಡ್ ಆರ್ಮಿ ಇಂಜಿನಿಯರ್ ನಾಗರಾಜ ಬಿರಾದಾರ,ಮೀನುಗಾರಿಕೆ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ನಮ್ಮ ಭಾಗಕ್ಕೆ ದೇವರು ಕೊಟ್ಟ ವರದಾನ. ಆದರೆ ಇಲ್ಲಿನ ಮೀನುಗಾರಿಕೆ ಲಾಭವನ್ನು ಅನ್ಯ ರಾಜ್ಯದವರು ಪಡೆಯುತ್ತಿದ್ದಾರೆ. ನಮ್ಮ ಭಾಗದ ಯುವಕರು ಕೇವಲ ಕೂಲಿ ಕಾರ್ಮಿಕರಾಗದೆ, ಮೀನುಗಾರಿಕೆಯಲ್ಲಿ ಕೌಶಲ ಪಡೆದು ಸ್ವಂತ ಉದ್ಯಮ ಆರಂಭಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರುಕಟ್ಟೆ ಕಂಡುಕೊಂಡರೆ ಮೀನುಗಾರರ ಬದುಕು ಬಂಗಾರವಾಗಲಿದೆ. ಸಿದ್ದಾಪುರ ಸೀಡ್ ಫಾರ್ಮ್ ಅನ್ನು ಮತ್ತಷ್ಟು ಬಲಪಡಿಸಿ ಸ್ಥಳೀಯವಾಗಿ ಮೀನುಮರಿಗಳು ಸಿಗುವಂತೆ ಮಾಡುವುದು ನಮ್ಮ ಗುರಿ.”
— ಸಿ.ಎಸ್. ನಾಡಗೌಡ, ಶಾಸಕರು ಹಾಗೂ ಅಧ್ಯಕ್ಷರು ಕೆಎಸ್‍ಡಿ ನಿಗಮ.