ಅಫಜಲಪುರ: ಜಗತ್ತು ಬದಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ ಇಂದು ಉತ್ತುಂಗಕ್ಕೇರಿವೆ. ಈಗ ಕೃಷಿಕರು ಕೂಡ ಸಾಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ಕೃಷಿಯ ಬಗ್ಗೆ ಅರಿತುಕೊಂಡು ಕೃಷಿ ಕಾಯಕ ಮಾಡಬೇಕೆಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಬಡದಾಳ ಗ್ರಾಮದ ರೈತ ಉತ್ಪಾದಕ ಸಂಘದಿಂದ ಮೂರು ದಿನಗಳ ಕಾಲ ರೈತ ಅಧ್ಯಯನ ಪ್ರವಾಸದ ಬಸ್ಸಿಗೆ ಚಾಲನೆ ನೀಡಿ ಮಾತನಾಡುತ್ತಾ ಅನೇಕ ಸರ್ಕಾರಗಳು ರೈತರ ಬದುಕು ಬದಲಿಸುತ್ತೇವೆಂದು ಅಧಿಕಾರಕ್ಕೆ ಬರುತ್ತವೆ, ಅಧಿಕಾರಕ್ಕೆ ಬಂದ ಬಳಿಕ ರೈತರ ಹಿತ ಮರೆಯತ್ತವೆ. ಹೀಗಾಗಿಯೇ ಇಂದು ರೈತರು ಸರಿಯಾದ ಕೃಷಿ ಕಾಯಕ ಮಾಡಲಾಗುತ್ತಿಲ್ಲ, ಅನೇಕ ರೈತರು ಸಾಲ ಬಾಧೆಯಿಂದ ಸಾವನ್ನಪ್ಪುತ್ತಿದ್ದಾರೆ. ಇವುಗಳನ್ನು ತಪ್ಪಿಸಲು ಸರ್ಕಾರಗಳು ಸಮರ್ಪಕ ಕೃಷಿ ನೀತಿಗಳನ್ನು ಜಾರಿಗೆ ತರಬೇಕು, ರೈತರಿಗೆ ಬೇಕಾದ ವಿದ್ಯುತ್, ನೀರು ಪೂರೈಕೆ ಮಾಡಬೇಕು ಎಂದ ಅವರು ಕೃಷಿ ಅಧ್ಯಯನ ಪ್ರವಾಸ ಯಶಸ್ವಿಯಾಗಲಿ, ಪ್ರವಾಸಕ್ಕೆ ಹೋದವರೆಲ್ಲ ಸರಿಯಾದ ಮಾಹಿತಿ ಪಡೆದುಕೊಂಡು ಬರುವ ದಿನಗಳಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀಕಾಂತ ನಿಂಬಾಳ ಮಾತನಾಡಿ ಸರ್ಕಾರದ ಸಹಕಾರದಿಂದ ಮೂರು ದಿನಗಳ ಕಾಲ ಗೋಕಾಕ, ಹುನಗುಂದ ಹಾಗೂ ಕಲಾದಗಿ ಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದೇವೆ. ಈ ಮೂರು ದಿನಗಳಲ್ಲಿ ಅಲ್ಲಿನ ರೈತ ಉತ್ಪಾದಕ ಸಂಘಗಳು ಹೇಗೆ ಅಭಿವೃದ್ದಿ ಹೊಂದಿವೆ, ಯಾವ ಪದ್ದತಿಯ ಕೃಷಿಯನ್ನು ಮಾಡಿ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿರುವ ತಂತ್ರಜ್ಞಾನ ಬಳಕೆ ಹೇಗಿದೆ ಎಂಬಿತ್ಯಾದಿ ಅಂಶಗಳನ್ನು ಅರಿತುಕೊಳ್ಳಲಾಗುತ್ತದೆ. ಸುಮಾರು ೪೫ ರೈತರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಜಮಾಣಿ, ರಾಘವೇಂದ್ರ ಕಲಶೇಟ್ಟಿ, ಗುಂಡುರಾವ ಪಾಟೀಲ್, ಭೀಮರಾವ್ ಪಾಟೀಲ್, ಶ್ರೀಮಂತ ಪಾಟೀಲ್, ಮಹಾಂತೇಶ ಅತನೂರ, ಪುತ್ರು ಕುರುಬತಳ್ಳಿ, ಬಸಮ್ಮ ಗುತ್ತೇದಾರ, ಆನಂದ ಕುಂಬಾರ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.