ರೈತರು ರಸಗೊಬ್ಬರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ..!
ಇಂಡಿ: ಸಸ್ಯಗಳ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ೧೭ ಪೋಷಕಾಂಶಗಳ ಅಗತ್ಯವಿರುತ್ತದೆ. ರೈತರು ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ ಗಳನ್ನು ಬಳಸುತ್ತಿದ್ದಾರೆ. ಇದರ ಬದಲು ವಿವಿಧ ರಸಗೊಬ್ಬರಗಳನ್ನು ಸಂಯೋಜನೆಯೊಂದಿಗೆ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಸ್ಯಗಳಿಗೆ ಇಂಗಾಲ್, ಜಲಜನಕ, ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ನಿಸರ್ಗದಿಂದ ದೊರೆಯುತ್ತವೆ. ಉಳಿದ ೧೪ ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್, ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಜ, ಮಾಲಿಬ್ಡಿನಂ, ಕ್ಲೋರಿನ್, ಮತ್ತು ನಿಕ್ಕಲ್ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಇವುಗಳ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷಯುಕ್ತ ವಿವಿಧ ರಸಗೊಬ್ಬರಗಳು ಲಭ್ಯವಿವೆ. ಇವುಗಳನ್ನು ೪:೨:೧ ರ ಅನುಪಾತದಲ್ಲಿ ಬಳಸಬೇಕು ಆದರೆ ರೈತರು ಈ ಅನುಪಾತದಲ್ಲಿ ಬಳಸುವದಿಲ್ಲ.
ಗಂಧಕ ಒದಗಿಸುವ ೨೦:೨೦:೦:೧೩ ಹಾಗೂ ಇತರ ಸಂಯುಕ್ತ ರಸಗೊಬ್ಬರಗಳಾದ ೧೫: ೧೫: ೧೫, ೧೦:೨೬:೨೬, ೨೨: ೩೨: ೧೬, ೧೪: ೩೫: ೧೪, ೧೭:೧೭:೧೭, ೧೪:೨೮:೧೪, ೧೯: ೧೯: ೧೯, ೨೦:೧೦:೧೦ ಗಳನ್ನು ಬಳಸಬಹುದು. ಇಂಡಿ ತಾಲ್ಲೂಕಿನಲ್ಲಿ ಯೂರಿಯಾ, ಡಿ.ಎ.ಪಿ, ಎಂ.ಓ.ಪಿ ಸಂಯೋಜಕ ರಸಗೊಬ್ಬರ ಎಸ್.ಎಸ್.ಪಿ ರಸಗೊಬ್ಬರಗಳ ೧೦೯೧೮.೮೦ ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ರೈತರು ರಸಗೊಬ್ಬರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸಮಸ್ತ ತಾಲ್ಲೂಕಿನ ರೈತರು ಸಂಯೋಜಿತ ಗೊಬ್ಬರಗಳನ್ನು ಬಳಕೆ ಮಾಡಲು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮನವಿ ಮಾಡಿದರು.
ಇಂಡಿ: ಮಹಾದೇವಪ್ಪ ಏವೂರ ಭಾವಚಿತ್ರ