ಜಿಲ್ಲಾ ಪಂಚಾಯತ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ
ವಿಜಯಪುರ ಜೂ.01 : ಹಸಿರು ವಿಜಯಪುರ ಅಂಗವಾಗಿ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ರವಿವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಜಿಲ್ಲೆಯನ್ನು ಹಸರೀಕರಣಗೊಳಿಸಬೇಕೆಂಬ ನಿಟ್ಟಿನಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ 4ಲಕ್ಷ ಸಸಿ ನೆಡುವ ಗುರಿ ನಿಗದಿಪಡಿಸಲಾಗಿದೆ. ಕೋಟಿ ವೃಕ್ಷ ಅಭಿಯಾನ ಸೇರಿದಂತೆ ಅರಣ್ಯೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ವಿಜಯಪುರ ನಗರವೊಂದರಲ್ಲಿ ಈ ವರ್ಷ 10 ಸಾವಿರ ಸಸಿಗಳನ್ನು ನೆಡಲಾಗುತ್ತಿದ್ದು, ಇದರಂಗವಾಗಿ ಜಿಲ್ಲಾ ಪಂಚಾಯತ್ ಆವರಣದಲ್ಲಿ 2 ಸಾವಿರಗಳನ್ನು ನೆಡಲಾಗಿದೆ. ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ಜಿಲ್ಲೆಯಲ್ಲಿ ನಿರಂತರವಾಗಿ ಪರಿಸರ ದಿನಾಚರಣೆ ಹಮ್ಮಿಕೊಂಡು ಹಸರಿಕರಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಹೊಂಗೆ, ಬೇವು, ಹುಣಸೆ, ನೇರಳೆ, ಆಲ, ಅರಳಿ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಶಿವಶರಣಯ್ಯ, ಸಾಮಾಜಿಕ ಅರಣ್ಯ ವಿಭಾಗದ ವನಿತಾ ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ, ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಆಜೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.



















