ಇಂಡಿಯ ಪ್ರಸಿದ್ಧ ನಟ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪಡೆದಿದ್ದರು..!
ಪ್ರಪಂಚದ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!
ಇಂಡಿಯ ಪ್ರಖ್ಯಾತ ನಟ-ನಿರ್ದೇಶಕ- ನಿರ್ಮಾಪಕನಿಗೆ ದೊರೆತ್ತಿದ್ದು ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಹಾಗೂ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!
ಯಾರು ಗೊತ್ತಾ..!
ಇಂಡಿ : ಭಾರತೀಯ ಚಲನ ಚಿತ್ರ ರಂಗದ ಪ್ರಖ್ಯಾತ ನಟ-ನಿರ್ದೇಶಕ – ನಿರ್ಮಾಪಕ ಕ್ರೀಯೆಟಿವ್ ಜೀನಿಯಸ್, ‘ ಮಾನುಷ ‘ ಚಲನ ಚಿತ್ರಕ್ಕೆ ಪ್ರಪಂಚದ ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್ ರಿಂದ ಪ್ರಶಂಸೆಗೊಳಪಟ್ಟಿದ್ದರು. ಜೀವನದಲ್ಲಿ ಸಾಧನೆಯ ಒಂದೊಂದು ಮೆಟ್ಟಿಲುಗಳನ್ನು ಯಶಸ್ವಿಯಾಗಿ ಮೇಲೇರಿದ ಶಾಂತಾರಾಮರಿಗೆ ಪದ್ಮವಿಭೂಷಣ ಪ್ರಶಸ್ತಿ ಮತ್ತು ಸಿನೆಮಾ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ದೊರಕಿದ್ದವು.
ಭಾರತದ ಸಿನೆಮಾ ಕ್ಷೇತ್ರದಲ್ಲಿ ದಿಗ್ವೀಜಯ ಸಾಧಿಸಿದ ಶಾಂತಾರಾಮ ಒಣಕುದುರೆ ಇವರು ಕನ್ನಡಿಗರು ಎಂಬುವದು ಹೆಮ್ಮೆಯ ಸಂಗತಿ. ಇವರ ಮನೆತನದ ಅಡ್ಡ ಹೆಸರು ಒಣಕುದುರೆ ಪದ ಸೂಚಿಸುವಂತೆ ಇದು ಅಪ್ಪಟ ಕನ್ನಡದ ಪದ ಎನ್ನುವದು ತಿಳಿದ ವಿಷಯವಾಗಿದೆ.ವ್ಹಿ ಶಾಂತಾರಾಮರ ಕನ್ನಡ (ಇಂಡಿಯ ಜೈನ ) ನಂಟುಗಳ ಬಗ್ಗೆ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದಾಗ ಅವರ ಮೂಲ ನೆಲೆ ಇಂಡಿ ಎನ್ನುವುದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿ ಕಾಣುತ್ತದೆ.
ರಾಜಾರಾಮ ಕಮಲಾಬಾಯಿ ಒಣಕುದುರೆ ದಂಪತಿಗಳ ಮಗನಾಗಿ 1901ರಲ್ಲಿ ಜನಿಸಿದ ಶಾಂತಾರಾಮ ಒಣಕುದರೆ ಇಂಡಿ ತಾಲೂಕಿನ ಹಲಸಂಗಿಯಿಂದ ?ವರ್ತಮಾನದಲ್ಲಿ ಇಂಡಿ ತಾಲೂಕಿನ ತಡವಲಗಾ, ಚಡಚಣ, ದೇವರ ನಿಂಬರಗಿ ಹಳ್ಳಿಗಳಲ್ಲಿ ಜೈನ ಸಮುದಾಯದ ಒಣಕುದುರೆ ಹೆಸರಿನ ಮನೆತನಗಳು ಈಗಲೂ ಅಸ್ತಿತ್ವದಲ್ಲಿವೆ. ನಟ ಶಾಂತಾರಾಮ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ವಲಸೆ ಹೋದ ಕನ್ನಡದ ಜೈನ ಕುಟುಂಬದ ಸದಸ್ಯರಾಗಿದ್ದರು. ಒಂದಂತೂ ಸತ್ಯ ಶ್ರೇಷ್ಠ ನಟ ವ್ಹಿ ಶಾಂತಾರಾಮ ಇವರು ಇಂಡಿ ತಾಲೂಕಿನ ಕನ್ನಡ ನೆಲದ ಹೆಮ್ಮೆಯ ಪುತ್ರ ಎನ್ನುವುದು ನಿರ್ವಿವಿವಾದದ ಮಾತಾಗಿದೆ.
ಮೊದಲಿಗೆ ಮಹಾರಾಷ್ಟ್ರದಲ್ಲಿ ಮೂಕಿ ಟಾಕಿ ಚಿತ್ರದಲ್ಲಿ ಬಾಲನಟರಾಗಿ ಶಾಂತಾರಾಮ ಅಭಿನಯಿಸಿದ್ದರು ಕೂಡಾ ಅವರಿಗೆ ಕಷ್ಟಗಳ ಕಾಟ ತಪ್ಪಲಿಲ್ಲ. ನಾಟಕದಲ್ಲಿ ಪರದೆ ಎಳೆಯುವ ಅವರ ಕೆಲಸದಿಂದ ಹಿಡಿದು , ಹುಬ್ಬಳಿಯಲ್ಲಿ ಡೆಕ್ಕನ್ ಚಂದ್ರಕಲಾ ಚಿತ್ರಮಂದಿರದಲ್ಲಿ ಗೇಟ್ ಕೀಪರಾಗಿ ನಂತರ ಸಮೀಪದ ರೈಲೈ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿ ಹುಬ್ಬಳ್ಳಿಯ ದುರ್ಗದ ಬೈಲಿನ ಜನರಿಗೆ ತಮ್ಮ ಮಾತೃ ಭಾಷೆ ಅಪ್ಪಟ ಕನ್ನಡಿಗರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತ ಪರಿಚಿತರಾಗಿದ್ದರು.
ಭಾರತೀಯ ಸಿನೆಮಾಗಳಲ್ಲಿ ವಿಶಿಷ್ಟವಾದ ಕ್ರೀಯಾಶೀಲತೆಯ ಪ್ರಯೋಗ ಮಾಡಿ ಸಿನೆಮಾ ಮಾಧ್ಯಮಕ್ಕೆ ಹೊಸ ಭಾಷ್ಯೆ ಬರೆದ ಗಾರುಡಿಗರೆಂದರೇ ವ್ಹಿ ಶಾಂತಾರಾಮ ಒಣಕದುರೆಯಾಗಿದ್ದರು. ಭಾರತೀಯ ಸಿನೆಮಾ ರಂಗದಲ್ಲಿ ತಮ್ಮ ಸೃಜನ ಶೀಲತೆಯ ಕತೆಗಳಿಂದ ಹೊಸ ಬದಲಾವಣೆಯ ದಿಕ್ಸೂಚಿಯಾಗಿದ್ದರು. ಸುಮಾರು ಇಪ್ಪತ್ತೈದು ಸಿನೆಮಾಗಳಲ್ಲಿ ನಟನಾಗಿ ಐವತ್ತೆರಡು ಸಿನೆಮಾಗಳನ್ನು ನಿರ್ದೇಶನ ಮಾಡಿ ಹಲವಾರು ಚಿತ್ರಗಳನ್ನು ತೆರೆಗೆ ತರುವಲ್ಲಿ ಶ್ರಮಿಸಿ ಭಾರತೀಯ ಚಿತ್ರರಂಗಕ್ಕೆ ಬಹು ಅಮೂಲ್ಯವಾದ ಕೊಡುಗೆ ನೀಡಿ ದೇಶ ತಿರುಗಿ ನೋಡುವಂತೆ ಸಾಧನೆ ಮಾಡಿದ್ದರು.
ಶಾಂತಾರಾಮರ ಮೊದಲ ಚಿತ್ರ ಸುರೇಖಾ ಹರಣ, ನೇತಾಜಿ ಪಾಲ್ಕರ್ ದೋ ಆಂಕೆ ಬಾರಾ ಹಾತ್, ಝನಕ್ ಝನಕ್ ಪಾಯಲ್,ಪಿಂಜಾರಾ ನವರಂಗ್, ದುನಿಯಾ ನಾ ಮಾನೆ ಮುಂತಾದ ಚಿತ್ರಗಳ ಪೈಕಿ ದೋ ಆಂಕೆ ಬಾರಾ ಹಾತ್,ಝನಕ್ ಝನಕ್ ಪಾಯಲ್ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಗಳು ದೊರಕಿದವು.
ಇವರು ನಟಿಸಿದ ಚಲನ ಚಿತ್ರಗಳಲ್ಲಿನ ಇವರ ಮನೋಜ್ಞವಾದ ನೈಜ ಅಭಿನಯ ಕಂಡು ಅಂದು ಸಹಸ್ರಾರು ಜನ ಪ್ರೇಕ್ಷಕರು ಮಾರು ಹೋಗಿದ್ದರು.ಇವರ ಅಭಿನಯದ ಮಾನವೀಯ ಮನೋವಿಜ್ಞಾನದ ಮೇಲೆ ರಚಿಸಲಾದ ದೋ ಆಂಕೆ ಬಾರಾ ಹಾತ್ ಸಿನೆಮಾದ ಕೊನೆಯ ಸನ್ನಿವೇಶದಲ್ಲಿ ರೊಚ್ಚಿಗೆದ್ದ ಗೂಳಿಯೊಂದಿಗೆ ನಟ ಶಾಂತಾರಾಮ ಸೆಣಸಾಡುವಾಗ ಗೂಳಿ ತನ್ನ ಕೊಂಬಿನಿಂದ ಅವರ ಕಣ್ಣಿಗೆ ತಿವಿದಿತ್ತು.ಚಿತ್ರದಲ್ಲಿ ಅವರ ಮೈನವೀರೇಳಿಸುವ ಅಭಿನಯ ನೋಡುಗರ ಎದೆ ಝಲ್ಲೆನ್ನುವoತಿದೆ. ಅವರ ಕಣ್ಣಿಗೆ ಗಾಯವಾದ ಪರಿಣಾಮ ಅವರು ಎಷ್ಟೊ ದಿನಗಳ ಕಾಲ ಕಪ್ಪು ಕನ್ನಡಕ ಹಾಕಿಕೊಳ್ಳವ ಪ್ರಸಂಗ ಬಂದಿತ್ತು. ಈ ರೀತಿಯ ದೃಶ್ಯಗಳನ್ನು ಅವರು ಎಷ್ಟೊಂದು ತನ್ಮಯರಾಗಿ ಅಭಿನಯಿಸುತ್ತಿದ್ದರು ಎನ್ನುವದಕ್ಕೆ ಚಲನಚಿತ್ರದ ಈ ಘಟನೆ ಸಾಕ್ಷಿಯಾಗಿದೆ.
ಇನ್ನೂ ಅವರ ಚಲನ ಚಿತ್ರಗಳಲ್ಲಿನ ಪ್ರಸಿದ್ಧ ಹಾಡುಗಳಾದ ಐ ಮಾಲಿಕ್ ತೇರೆ ಬಂದೆ ಹಮ್,ಪಂಕ್ ಹೋತೆ ತೊ ಉಡ ಜಾಯೇ,ಆದಾ ಹೈ ಚಂದ್ರಮಾ ಗಾನ ಗುಂಜನ ಈಗಲೂ ಜನಪ್ರಿಯತೆ ಉತ್ತುಂಗದ ಶಿಖರದಲ್ಲಿವೆ.ಇವರ ಚಿತ್ರಗಳಲ್ಲಿ ಮನ್ನಾ ಡೇ, ಆಶಾ ಬೋಸ್ಲೆ, ಮಂಗೇಶ್ಕರ್ ಖ್ಯಾತನಾಮರು ಹಿನ್ನೆಲೆ ಗಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಶಾಂತಾರಾಮರವರು ಬಾಬುರಾವ ಪೆಂಟರ್ ಸಿನೆಮಾ ನಿರ್ಮಾತನ ಹತ್ತಿರ ಕೆಲಸ ಮಾಡುತ್ತ ಪ್ರಭಾತ ಹೆಸರಿನ ಸಿನೆಮಾ ಸ್ಟುಡಿಯೋ ನಿರ್ಮಿಸಿದರು. ನಂತರ
ತಂದೆ ರಾಜರಾಮ ತಾಯಿ ಕಮಲಾದೇವಿ ಹೆಸರನ್ನ ಒಟ್ಟಾಗಿ ಸೇರಿಸಿ ಮುಂಬಯಿ ನಗರಿಯಲ್ಲಿ ರಾಜ-ಕಮಲ ಸ್ಟುಡಿಯೋ ನಿರ್ಮಿಸಿ ಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದರು.
ಭಾರತೀಯ ಚಲನ ಚಿತ್ರರಂಗದಲ್ಲಿ ಇವರ ಅನುಪಮವಾದ ಸೇವೆಯನ್ನು ಕಂಡು ಇವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಇವರಿಗೆ ಗೌರವಿಸಿತು.ಹಾಗೆ ಭಾರತೀಯ ಸಿನೆಮಾ ರಂಗದ ಶ್ರೇಷ್ಠ ಸಾಧನಾ ಪ್ರಶಸ್ತಿಯಾಗಿರುವ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ಕನ್ನಡದ ವರನಟ ಡಾ.ರಾಜಕುಮಾರ ಪ್ರಶಸ್ತಿ ಪಡೆಯುವ ಮೊದಲು 1985ರಲ್ಲಿ ದಾದಾಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ನಟ ಶಾಂತಾರಾಮ ಪಡೆದುಕೊಂಡರು. ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗನಾಗಿ ಇಂಡಿಯ ಜೈನ ಕುಟುಂಬವಾದ ಒಣಕುದುರೆ ಮನೆತನದ ಮೊದಲ ಕುಡಿಯಾಗಿ ಹೊರ ಹೊಮ್ಮಿದರು.