ಅರೆ ಬರೆ ಕಾಮಗಾರಿ ಮಾಡಿ ಬಿಲ್ ಎಗರಿಸಿದ ಆರೋಪ:
ಗ್ರಾ.ಪಂ. ನಲ್ಲಿ ಮೃತರ ಹೆಸರಿನಲ್ಲೂ ನರೇಗಾ ಹಣ ಲೂಟಿ:
ಮನವಿ ಸಲ್ಲಿಸಿ 2-3 ತಿಂಗಳೂ ಕಳೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು:
ಮಸ್ಕಿ: ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತ್‌ನಲ್ಲಿ 2021-2022 ನೇ ಸಾಲಿನ ನರೇಗಾ ಯೋಜನೆಯಲ್ಲಿ ಹಾಗೂ 15 ನೇ ಹಣಕಾಸಿನ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿ ನಿರ್ವಹಿಸದೇ ಬೋಗಸ್ ಬಿಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕರ್ತವ್ಯದಿಂದ ವಜಾ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈ ಕುರಿತು ತಾಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಾಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹಾಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲನಗೌಡ, ನೋಡಲ್ ಅಧಿಕಾರಿ ಶಿವಾನಂದ ರೆಡ್ಡಿ ಮತ್ತು ಸಂಬಂಧಿಸಿದ ಅಧಿಕಾರಿಗಳು 2021 -22 ನೇ ಸಾಲಿನ ನರೇಗಾ ಯೋಜನೆಯಡಿ ಮತ್ತು 15 ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸದೇ ಬೋಗಸ್ ಬಿಲ್‌ಗಳನ್ನು ಮಾಡಿದ್ದಾರೆ.
ರಾಜೀವ್ ಗಾಂಧಿ ಸೇವಾ ಕೇಂದ್ರ ಕಾಮಗಾರಿಯು ಹಾಲಾಪೂರ ಗ್ರಾಮ ಪಂಚಾಯತ್ ಛಾವಣಿ ಮೇಲ್ಗಡೆ ಮಾಡಬೇಕು ಆದರೆ ಗ್ರಾ. ಪಂ ಕಟ್ಟಡ
ಕಾಮಗಾರಿ ಮಾಡದೇ ಮುಂಗಡವಾಗಿ 13,57,445 ರೂಪಾಯಿಗಳ ಹಣವನ್ನು ಲಪಟಾಯಿಸಿದ್ದಾರೆ. 9 ಲಕ್ಷ ರೂ. ವರ್ಕ್ ಎಂಟ್ರಿ ಮಾಡಿ ಬೋಗಸ್ ಬಿಲ್ ತಯಾರಿಸಿ ಹಣವನ್ನು ಎಗರಿಸಿದ್ದಾರೆ.
ಇನ್ನು ನರೇಗಾ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಹೆಸರಲ್ಲಿ ಎನ್‌ಎಂಆರ್ ಹಾಕಿ ಹಣವನ್ನು ಡಾಟಾ ಆಪರೇಟರ್ ಆದ ರಂಗಪ್ಪ ಹಾಲಾಪೂರು ಪಿಡಿಓ ಸೇರಿಕೊಂಡು ಮೃತರ ಹೆಸರಿನಲ್ಲಿ ಹಣ ಲಪಟಾಯಿಸಿದ್ದಾರೆ.
ನರೇಗಾ ಯೋಜನೆಯಡಿ ಸುಮಾರು 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನವು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಶಾಮೀಲಾಗಿ ಹಣ ದುರ್ಭಳಕೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿನ ನೈರ್ಮಲೀಕರಣ ಹಾಗೂ ಅಂಗವಿಕಲರ ಕಲ್ಯಾಣ ನಿಧಿ ಕಾಮಗಾರಿ ಮಾಡದೇ ಬೋಗಸ್ ಬಿಲ್ಲಮಾಡಿದ್ದಾರೆ. ಕೆಲವೊಂದು ಕಾಮಗಾರಿಗಳನ್ನು ಅರೆಬರೆ ಮಾಡಿ ಮುಚ್ಚಿಹಾಕಲಾಗಿದೆ.
ಆದ್ದರಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೋಡಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಮರಿಸ್ವಾಮಿ ಮುದಬಾಳ ಹಾಗೂ ಸುಭಾಷ್ ಹಿರೇ ಕಡಬೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.