ಮುದ್ದೇಬಿಹಾಳ:ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಲು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರಿಗೆ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಕೆಲಸಕ್ಕಾಗಿ ಬೇಡಿಕೆ ಅರ್ಜಿಗಳನ್ನು ಪಡೆಯಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕ (ಗ್ರಾ.ಉ.) ಪಿ.ಎಸ್.ಕಸನಕ್ಕಿ ಹೇಳಿದರು.
ತಾಲೂಕಿನ ಬಿಜ್ಜೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಾಳಪೂಜಿ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದ ಇದರಿಂದ ಪ್ರತಿ ಗ್ರಾ.ಪಂ.ಯಲ್ಲಿ ನಿರಂತರ ಕೆಲಸ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ನರೇಗಾ ಕೂಲಿಕಾರರಿಗೆ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ನೀಡಲಾಗುವುದು. ಕಾಯಕಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರ ಬೇಡಿಕೆ ಸಂಗ್ರಹಿಸಬೇಕು. ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿಹೊಂಡ, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ನಿಂಬೆ, ನುಗ್ಗೆ ಇತರೆ ಬೆಳೆಗಳನ್ನು ಬೆಳೆಯಲು ನರೇಗಾದಡಿ ಪ್ರೋತ್ಸಾಹ ಧನ ನೀಡುತ್ತಿದ್ದು ಇಲ್ಲಿಯೂ ಕೆಲಸ ಮಾಡಿ ಕೂಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜ್ಜೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶರಣಮ್ಮ ವಿ. ಹೊಸಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್, ಸಾ.ಪ.ತಾಲೂಕು ವ್ಯವಸ್ಥಾಪಕರು ಚಿದಾನಂದ ಕೊಳಾರಿ, ಪಿಡಿಒ ಕೆ.ಹೆಚ್.ಕುಂಬಾರ, ತಾಲೂಕು ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಡಿಇಒ ವೈ.ವಿ.ಜಗಲರ, ಕಾರ್ಯದರ್ಶಿ, ಬಿಎಫ್ ಟಿ, ಎಂಬಿಕೆ ಗ್ರಾ.ಪಂ.ಸಿಬ್ಬಂದಿ ಸೇರಿದಂತೆ ಉಪಸ್ಥಿತರಿದ್ದರು.