ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ಸಮರ್ಥ ನಿರ್ವಹಣೆಗೆ Chronological -ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ
ವಿಜಯಪುರ ಜೂ.01: ಅವಧಿಗೆ ಮುನ್ನವೇ ಮಳೆಗಾಲ ಆರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಳೆ ಸಂಭವಿಸಿ ಪ್ರವಾಹ ಪರಿಸ್ಥಿತಿ ಎದುರಾಗುವ ಪ್ರದೇಶಗಳಲ್ಲಿ ಜನ-ಜಾನುವಾರುಗಳ ರಕ್ಷಣೆಗೆ ಅಗತ್ಯವಿರುವ ಬೋಟ್ ವ್ಯವಸ್ಥೆ, ರೋಪ್ ಸೇರಿದಂತೆ ಅಗತ್ಯ ರಕ್ಷಣಾ ಪರಿಕರಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ ಜರುಗಿದ ಮುಂಗಾರು ಸಿದ್ಧತೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ, ಜಾನುವಾರುಗಳಿಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಭಾಗಶಃ ಹಾನಿಯಾದ ಹಾಗೂ ಸಂಪೂರ್ಣವಾಗಿ ಹಾನಿಯಾದ ಮನೆಗಳಿಗೆ ಮಾರ್ಗಸೂಚಿಯಂತೆ ತುರ್ತಾಗಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಜನ-ಜಾನುವಾರುಗಳ ಹಾನಿ, ಸಿಡಿಲು ಬಡಿದು ಸಂಭವಿಸುವ ಹಾನಿಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಗ್ರಾಮೀಣ ಭಾಗದಲ್ಲಿ ಜನರಲ್ಲಿ ಸೂಕ್ತ ಜಾಗೃತಿ-ತಿಳುವಳಿಕೆ ನೀಡಬೇಕು. ಸಂಭವಿಸಬಹುದಾದ ಹಾನಿಯ ನಿಯಂತ್ರಣ ಹಾಗೂ ತಪ್ಪಿಸಲು ಜನರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ, ಶಾಲಾ ಕಟ್ಟಡಗಳ, ವಿವಿಧ ವಸತಿ ನಿಲಯಗಳ ಸ್ಥಿತಿ ಕುರಿತು ಕೂಲಂಕೂಷವಾಗಿ ಪರಿಶೀಲನೆ ನಡೆಸಬೇಕು.
ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳ ಬದಲಾಗಿ ಪÀರ್ಯಾಯವಾಗಿ ಬಾಡಿಗೆ ಅಥವಾ ಖಾಸಗಿ ಕಟ್ಟಡ ವ್ಯವಸ್ಥೆಯಲ್ಲಿ ಪಾಠ ಬೋಧನೆಗೆ ಕ್ರಮ ವಹಿಸುವಂತೆÉ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಮಳೆ ನೀರು, ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು. ಮಳೆ ನೀರು ನಿಂತು ಪ್ರವಾಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿಜಯಪುರ ನಗರದ ಇಬ್ರಾಹಿಂರೋಜಾ ಹಿಂದೆ, ರಾಮನಗರದಿಂದ ಬಿದನೂರ ಪೆಟ್ರೋಲ್ ಪಂಪವರೆಗೆ, ಬಬಲೇಶ್ವರ ನಾಕಾ ರಸ್ತೆ, ಗಚ್ಚಿನಕಟ್ಟಿ ಕಾಲನಿ, ಮನಗೂಳಿ ಅಗಸಿ ಹತ್ತಿರ, ಅಪ್ಸರಾ ಟಾಕೀಜ್ ಹತ್ತಿರ, ಬಾಗಾಯತ್ ಗಲ್ಲಿ ಸೇರಿದಂತೆ ವಿವಿಧೆಡೆ ಮಳೆ ನೀರು ಒಂದೆಡೆ ನಿಂತು ಅನಾಹುತಗಳಾಗಿವೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ, ಪ್ರವಾಹ ಪರಿಸ್ಥಿತಿ ಎದುರಾಗದಂತೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಸ್ವಚ್ಛಗೊಳಿಸಿ, ಅತಿಕ್ರಮಣವಾದ ಜಾಗ ಹಾಗೂ ರಾಜ್‍ಕಾಲುವೆಗಳನ್ನು ಸ್ವಚ್ಛಗೊಳಿಸಿ ಪ್ರವಾಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ ಮಾಡಬೇಕು. ಕಲಬೆರಕೆ ರಸಗೊಬ್ಬರ ಪೂರೈಕೆಯಾಗದಂತೆ ತೀವ್ರ ನಿಗಾ ಇರಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಬೀಜ-ರಸಗೊಬ್ಬರಗಳ ಅಗತ್ಯ ದಾಸ್ತಾನಿಟ್ಟುಕೊಂಡು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ತೊಗರಿ ಬೆಳೆ ವಿಮೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ಬಾಕಿ ಉಳಿಸಿಕೊಂಡಿರುವ ತೊಗರಿ ಬೆಳೆ ವಿಮೆ ಪಾವತಿಗೆ ಕ್ರಮ ವಹಿಸಬೇಕು. ತೊಗರಿ ಬೆಳೆ ಹಾನಿ ಪರಿಹಾರ ಕಲ್ಪಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಮಳೆ-ಗಾಳಿ ರಭಸಕ್ಕೆ ವಿವಿಧೆಡೆ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಹರಿದು ಬೀಳುವ ಸಂಭವವಿರುವುದರಿಂದ ಯಾವುದೇ ಜನ-ಜಾನುವಾರುಗಳ ಹಾನಿಯಾಗದಂತೆ ತ್ವರಿತವಾಗಿ ಹರಿದು ಬಿದ್ದಿರುವ ವಿದ್ಯುತ್ ತಂತಿ, ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಬೇಕು. ಸುಟ್ಟು ಹೋಗಿರುವ ಟ್ರಾನ್ಸ್‍ಫಾರ್ಮರ್‍ಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮ ವಹಿಸಬೇಕು. ಶಾಲಾ ಕಾಲೇಜ್ ಆರಂಭವಾಗುವುದರಿಂದ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಶಾಲಾ ಸಮಯಕ್ಕನುಗುಣವಾಗಿ ಸಾರಿಗೆ ಬಸ್‍ಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಲಾಗುತ್ತಿದ್ದು, ಅನುಮೋದನೆ ಪಡೆದುಕೊಳ್ಳಲು ಬಾಕಿ ಇರುವ ವಿವಿಧ ಕಾಮಗಾರಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಬರುವ ಶುಕ್ರವಾರ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಜಿಲ್ಲೆಯ ವಿವಿಧ ಅಭಿವೃದ್ದಿಗಾಗಿ ಕೈಗೊಂಡಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೊರೋನಾ-19ಗೆ ಸಂಬಂಧಿಸಿದ ಯಾವುದೇ ಪ್ರಕರಣಗಳಿಲ್ಲ. ಆದ್ಯಾಗ್ಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುವ ಜಾತ್ರೆ-ಉತ್ಸವದ ಸಂದರ್ಭಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಅವರು ಸೂಚನೆ ನೀಡಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಯಾವುದೇ ನೆಪ ಬೇಡ ರಿಸಲ್ಟ್ ಬೇಕು : ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಕುರಿತು ಯಾವುದೇ ನೆಪ ಬೇಡ ನನಗೆ ರಿಸಲ್ಟ್ ಬೇಕು. ಯಾವುದೇ ಕಲಿಕಾ ಸಾಮಗ್ರಿಗಳ ಕೊರತೆ ಇದ್ದಲ್ಲಿ, ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹರಿಸಿ, ಅನುದಾನದ ಅವಶ್ಯಕತೆ ಇದ್ದಲ್ಲಿ ಸಿಎಸ್‍ಆರ್ ಅನುದಾನವನ್ನು ಒದಗಿಸುತ್ತೇನೆ. ಒಟ್ಟಾರೆಯಾಗಿ ನನಗೆ ಉತ್ತಮ ಫಲಿತಾಂಶ ಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕು. ಉತ್ತಮ ಫಲಿತಾಂಶಕ್ಕಾಗಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನೊಳಗೊಂಡು ವಿಶೇಷ ಮುತುವರ್ಜಿ ವಹಿಸಿ, ಕಾಲ-ಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಬೋಧನಾ ವ್ಯವಸ್ಥೆ, ಮಕ್ಕಳ ಶಿಕ್ಷಣ ಗುಣಮಟ್ಟ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳು ಸವಾಲಾಗಿ ಸ್ವೀಕರಿಸಿಕೊಂಡು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಫಲಿತಾಂಶ ಸುಧಾರಣೆಯಲ್ಲಿ ತೊಡಕಾಗುವ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಮೌಲ್ಯಮಾಪನ ಪರೀಕ್ಷೆ ನಡೆಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಶಿಕ್ಷಕರ ಕೊರತೆ ಸೇರಿದಂತೆ ಸಮಸ್ಯೆಗಳನ್ನು ನಿವಾರಿಸಿಕೊಂಡು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಭಾಗಶಃ ಹಾನಿಗೊಳಗಾದ ಮನೆಗಳಿಗೆ ಮಾರ್ಗಸೂಚಿಯಂತೆ 6500 ರೂ. ಹಾಗೂ 4000 ರೂ.ಗಳ ಪರಿಹಾರ ಒದಗಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ವಿವಿಧ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 36 ಕೋಟಿ ರೂ. ಹಾಗೂ ತಹಶೀಲ್ದಾರಗಳ ಖಾತೆಯಲ್ಲಿ 5 ಕೋಟಿ ರೂ. ಲಭ್ಯವಿದ್ದು, ಆಯಾ ತಾಲೂಕಾ ತಹಶೀಲ್ದಾರಗಳಿಗೆ ಈ ಕುರಿತು ಅಗತ್ಯ ಕ್ರಮ ವಹಿಸಲು ಈಗಾಗಲೇ ಸೂಚಿಸಲಾಗಿದ್ದು, ಹೆಚ್ಚಿನ ಅನುದಾನದ ಬೇಡಿಕೆ ಸಲ್ಲಿಸಿದ್ದಲ್ಲಿ ಅನುದಾನವನ್ನು ಆಯಾ ತಹಶೀಲ್ದಾರಗಳ ಖಾತೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಿಡಿಲು ಬಡಿದು 8 ಜನರು ಸಾವನ್ನಪ್ಪಿದ್ದು, ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆಗಳು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಜರುಗುತ್ತಿರುವುದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛತಾವಾಹಿನಿ ಮೂಲಕ ಸಿಡಿಲಿನಿಂದ ಆಗುವ ಪ್ರಾಣ ರಕ್ಷಣೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿದಂತೆ
ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.



















