ಚಾಮರಾಜನಗರ: ಇಲ್ಲಿನ ನಗರಸಭೆ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರೊಬ್ಬರಿಗೆ ನಗರದ ಪ್ರಧಾನ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಚಾಮರಾಜ ನಗರಸಭೆ 15 ನೇ ವಾರ್ಡಿನ ಸದಸ್ಯ ರಾಮ ಸಮುದ್ರದ ಆರ್.ಪಿ. ನಂಜುಂಡಸ್ವಾಮಿ ಶಿಕ್ಷೆಗೆ ಒಳಗಾದ ಸದಸ್ಯ. ನಂಜುಂಡಸ್ವಾಮಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮೊಹಮದ್ ರೋಷನ್ ಷಾ ಅವರು ಶುಕ್ರವಾರ ಈ ತೀರ್ಪು ನೀಡಿದ್ದಾರೆ.
ಅಪರಾಧಿಗೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2010 ರ ನವೆಂಬರ್ 10 ರಂದು ನಗರದ ಹೊರವಲಯದಲ್ಲಿರುವ ಎಡ ಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭೆ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ವೇಳೆ ಹಳೆ ಕಾಮಗಾರಿಗಳ ವಿಚಾರವಾಗಿ ತಗಾದೆ ತೆಗೆದು ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ಆಯುಕ್ತ ಎಸ್ .ಪ್ರಕಾಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು.