ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಿಲರಿ ಮತ್ತು ಎಥಿನಾಲ್ ಉತ್ಪಾದನೆ..!
ಇಂಡಿ: ಮುಂದಿನ ಕಬ್ಬು ನುರಿಸುವ ಹಂಗಾಮಿನ
ಒಳಗಾಗಿ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ
ಡಿಸ್ಟಿಲರಿ ಮತ್ತು ಎಥಿನಾಲ್ ಉತ್ಪಾದನೆ ಮಾಡಲು
ಈಗಾಗಲೇ ಸಿದ್ದತೆ ನಡೆಸಲಾಗಿದೆ. ಅದಕ್ಕಾಗಿ
ಅಗತ್ಯವಿರುವ ೧೫೯ ಕೋಟಿ ಹಣವನ್ನು ಸರ್ಕಾರ
ಮತ್ತು ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ
ಶೇಕಡಾ ೬ ರ ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರ್ಣಯಿಸಿದೆ ಎಂದು ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಥಿನಾಲ್ ಉತ್ಪಾದನೆಯ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕ
ತಕ್ಷಣವೇ ಪ್ರಾಂಚ್ ಕಂಪನಿ ಕೆಲಸ ಕೈಗೆತ್ತಿಕೊಳ್ಳಲಿದೆ. ಕಳೆದ ೬ ವರ್ಷಗಳಿಂದ ಯಾವದೇ ಅಡತಡೆಯಿಲ್ಲದೇ ಕಾರ್ಖಾನೆ ಕಬ್ಬು ನುರಿಸಿದೆ. ಎಫ್‌ಆರ್‌ಪಿ ದರಕ್ಕಿಂತಲೂ ಹೆಚ್ಚಿನ ದರವನ್ನು ರೈತರಿಗೆ ನೀಡಲಾಗಿದೆ. ಕಾರ್ಖಾನೆ ಕಟ್ಟಲು ತೆಗೆದುಕೊಂಡಿರುವ ವಿವಿಧ ಬ್ಯಾಂಕುಗಳಲ್ಲಿರುವ
ಸಾಲವನ್ನು ಕಂತು ಸಮೇತ ಬಡ್ಡಿಯನ್ನು ಆಯಾ
ವರ್ಷದ ಮಾರ್ಚ ತಿಂಗಳು ಮುಗಿಯುವದರೊಳಗಾಗಿ ಕಟ್ಟಲಾಗಿದೆ. ಕಾರ್ಖಾನೆ ಮುನ್ನಡೆಸಲು ಯಾವದೇ ತೊಂದರೆಗಳಿಲ್ಲ ಎಂದರು.
ಕಳೆದ ವರ್ಷ ೫.೩೦ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಪ್ರಸಕ್ತ ವರ್ಷ ಮಳೆ ಸರಿಯಾಗಿ ಆಗದ ಕಾರಣ ಕಬ್ಬು ಸರಿಯಾಗಿ ಬೆಳೆದಿಲ್ಲ. ಕಾರಣ ಮುಂದಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಸುಮಾರು ೪ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದ ಅವರು ನಮ್ಮ ಕಾರ್ಖಾನೆಯ ಮೇಲೆ ವಿಶ್ವಾಸವಿಟ್ಟು ರೈತರು ಹೆಚ್ಚಿನ ಕಬ್ಬು ಕಾರ್ಖಾನೆಗೆ ಕಳಿಸಿಕೊಡಬೇಕೆಂದು ಮನವಿ ಮಾಡಿಕೊಂಡರು. ಮುಂದಿನ ವರ್ಷದಲ್ಲಿ ರೈತರಿಗೆ ಹೆಚ್ಚು ಇಳುವರಿ ಬರುವ ಸುಧಾರಿತ ಕಬ್ಬಿನ ಬೀಜ, ಗೊಬ್ಬರ ನೀಡುವದಲ್ಲದೇ ಕಬ್ಬು ಬೆಳೆಗಾರ ರೈತರಿಗೆ ಕಬ್ಬು ಬೆಳೆಯ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಮಾಡುವದಾಗಿ ಭರವಸೆ ನೀಡಿದರು.
ಸಭೆಯಲ್ಲಿ ರೈತ ಮುಖಂಡ ಪಂಚಪ್ಪ ಕಲಬುರಗಿ,
ಶ್ರೀಮಂತ ಇಂಡಿ, ಗುರುನಾಥ ಬಗಲಿ, ಅಲ್ಲಮಪ್ರಭು
ಪಾಟೀಲ, ಅಪ್ಪುಗೌಡ ಪಾಟೀಲ, ಗಾಂಧಿಗೌಡ ಮಾತನಾಡಿ, ಕಾರ್ಖಾನೆಗೆ ಅನಾವಶ್ಯಕವಾಗಿ ಕೆಲವು ಖರ್ಚು ಹೆಚ್ಚಿಗೆ ಮಾಡಲಾಗಿದೆ. ಅವುಗಳನ್ನು ತಗ್ಗಿಸಬೇಕು. ೨೫ ಸಾವಿರವಿದ್ದ ಶೇರ ದರ ಕಡಿಮೆ ಮಾಡಬೇಕು, ೧೯೮೧ ರಲ್ಲಿ ಶೇರು ಖರಿದಿಮಾಡಿ ಮರಣ ಹೊಂದಿರುವವರನ್ನು ಗುರುತಿಸಿ ಅವರ ಮನೆಯಲ್ಲಿ ಇನ್ನಿತರ ಸದಸ್ಯರಿಗೆ ಶೇರು ನೀಡಬೇಕು. ಭೀಮಾ ನದಿಯ ನೀರಿಗೆ ತೆರಿಗೆ ನೀಡಬಾರದು ಎನ್ನುವ ಮುಂತಾದ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಕಳೆದ ವರ್ಷದ ಕಬ್ಬು ನುರಿಸುವ
ಹಂಗಾಮಿನಲ್ಲಿ ಹೆಚ್ಚು ಕಬ್ಬು ಪೂರೈಸಿದ ೪ ಜನ
ರೈತರಿಗೆ ತಲಾ ೧ ತೊಲೆ ಬಂಗಾರ ಕಾಣಿಕೆ ನೀಡಿ
ಗೌರವಿಸಲಾಯಿತು. ವೇದಿಕೆಯಲ್ಲಿ ಕಾರ್ಖಾನೆಯ
ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕರಾದ
ಬಿ.ಎಂ.ಕೋರೆ, ಸಿದ್ದಣ್ಣ ಬಿರಾದಾರ ಹತ್ತಳ್ಳಿ, ಜೆಟ್ಟೆಪ್ಪ
ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ಅರ್ಜುನ ನಾಯ್ಕೋಡಿ, ಲಲಿತಾ ನಡಗೇರಿ, ಧಾನಮ್ಮಗೌಡತಿ ಪಾಟೀಲ, ಮಹಾದೇವ ನಗರೆ,
ಎಂ.ಆರ್.ಪಾಟೀಲ, ಎಂಡಿ ಎಸ್.ಕೆ.ಭಾಗ್ಯಶ್ರೀ ಇದ್ದರು. ಎಂ.ಆರ್.ಪಾಟೀಲ ಸ್ವಾಗತಿಸಿದರು. ಹಿರೇಮಠ ನಿರೂಪಿಸಿದರು.