ನಂದಿ ಆಧಾರಿತವಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸುವ ಸಂಕಲ್ಪ ಕಾರ್ಯಕ್ರಮಕ್ಕೆ ಕಾರ ಹುಣ್ಣಿಮೆಯಂದು ಚಾಲನೆ
ವಿಜಯಪುರ : ‘ನಂದಿ ಕೂಗು’ ಅಭಿಯಾನದ ಅಡಿಯಲ್ಲಿ ನಂದಿ ಆಧಾರಿತ ಗ್ರಾಮ ಪಂಚಾಯತಿ ಚುನಾವಣೆ ನಡೆಯಬೇಕಾದ ಅವಶ್ಯಕತೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ “ನಮ್ಮ ಗ್ರಾಮ-ನಮ್ಮ ನಂದಿ ಸಂಪತ್ತು” ಕಾರ್ಯಕ್ರಮಕ್ಕೆ ಬೋರಣಾಪುರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ನಂದಿ ಕೂಗು ಅಭಿಯಾನದ ರೂವಾರಿಗಳಾದ ಬಸವರಾಜ ಬಿರಾದಾರ ಅವರು ಮಾತನಾಡಿ, ಗ್ರಾಮಗಳಲ್ಲಿ ನಂದಿ ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ‘ನಂದಿ ಕೂಗು’ ಅಭಿಯಾನವು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಅವರ ಜನ್ಮ ಸ್ಥಳವಾದ ಬಿಜ್ಜರಗಿಯಿಂದ ಪ್ರಾರಂಭವಾಗಿದೆ. ಗ್ರಾಮಗಳಲ್ಲಿ ಕಳೆದ 20 ವರ್ಷಗಳಲ್ಲಿ 80 ಪ್ರತಿಶತ ನಂದಿ ಸಂಪತ್ತು ನಾಶವಾಗಿದೆ. ಗ್ರಾಮಗಳಲ್ಲಿ ನಂದಿ ಸಂಪತ್ತು ನಾಶವಾದಂತೆ ರೈತರ ಸಾಲ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರೆದರೆ, ಕೃಷಿ ಅವಲಂಬಿತ ಉದ್ದಿಮೆಗಳಾದ ಸಕ್ಕರೆ ಕಾರ್ಖಾನೆ, ರೈಸ್ ಮಿಲ್ಸ್, ದಾಲ್ ಮಿಲ್ಸ್ ಹಾಗೂ ಇತರ ಉದ್ದಿಮೆಗಳು ಅವನತಿ ಹೊಂದಲು ಪ್ರಾರಂಭಿಸುತ್ತವೆ. ನಂದಿ ಸಂಪತ್ತು ಉಳಿದರೆ ಪಶು ಸಂಪತ್ತು ಉಳಿದು ತಿಪ್ಪೆ ಗೊಬ್ಬರ ಎಲ್ಲ ರೈತರಿಗೆ ದೊರೆಯುವುದು. ಈಗಾಗಲೇ ಹಲವು ವಾಣಿಜ್ಯ ಬೆಳೆಗಳಿಗೆ ತಿಪ್ಪೆ ಗೊಬ್ಬರ ಸಿಗದ ಪರಿಸ್ಥಿತಿ ನಿರ್ಮಾಣವಾಗಿ ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆ ಹೆಚ್ಚಾಗುತ್ತಿದೆ.
ಗ್ರಾಮಗಳಲ್ಲಿ ರೈತ ಸಮುದಾಯ ಉಳಿಯಬೇಕಾದರೆ ನಂದಿ ಸಂಪತ್ತನ್ನು ಹೆಚ್ಚಿಸುವ ಅವಶ್ಯಕತೆ ಬಂದೊದಗಿದೆ. ಅದಕ್ಕಾಗಿ, ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯ ಮುಖ್ಯ ವಿಷಯ ಗ್ರಾಮದ ನಂದಿ ಸಂಪತ್ತನ್ನು ಹೆಚ್ಚಿಸುವುದು ಆಗಬೇಕಾಗಿದೆ. ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಆರ್ಥಿಕ ಭದ್ರತೆ ಇರುವುದರಿಂದ ಆ ಕಡೆ ಎಲ್ಲರೂ ಕೂಡ ಮುಖಮಾಡುತ್ತಿದ್ದಾರೆ. ವರ್ಷಪೂರ್ತಿ ಶ್ರಮವಹಿಸಿ ದುಡಿಯುವ ಜೋಡೆತ್ತಿನ ರೈತರಿಗೆ ಯಾವುದೇ ಆರ್ಥಿಕ ಭದ್ರತೆ ಇರದೇ ಇರುವುದರಿಂದ ಜೊಡೆತ್ತಿನ ಕೃಷಿ ತ್ಯಜಿಸುತ್ತಿದ್ದಾರೆ. ಇದರಿಂದಾಗಿ ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುವುದು ಹೆಚ್ಚಾಗುತ್ತಿದೆ. ಅದಕ್ಕಾಗಿ, ಸರ್ಕಾರವು ನಂದಿ ಕೃಷಿಕರಿಗಾಗಿ ಪ್ರತಿ ವರ್ಷ 10 ಪ್ರತಿಶತ ಬಡ್ಜೆಟ್ ಮೀಸಲಿರಿಸಿ ಪ್ರತಿ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದರೆ, ಮುಂದಿನ ಒಂದು ವರ್ಷದಲ್ಲಿ ಪ್ರತಿ ಗ್ರಾಮಗಳಲ್ಲಿ ನಂದಿ ಸಂತತಿ ದ್ವಿಗುಣವಾಗುವುದು. ಅದಕ್ಕಾಗಿ, ಗ್ರಾಮಗಳಲ್ಲಿರುವ ಹಲವು ಪ್ರಜ್ಞಾವಂತರು ಒಂದಾಗಿ ನಂದಿಗಾಗಿ ಮತ ಮೀಸಲಿಡುವ ಸಂಕಲ್ಪ ಮಾಡಿ ಇತರರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮದ ಭವಿಷ್ಯ ನಂದಿ ಸಂಪತ್ತಿನ ಮೇಲೆ ನಿಂತಿದೆ ಎಂಬುದನ್ನು ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ ಹಾಗೂ ಇತರ ನಂದಿ ಆಧಾರಿತ ಆಚರಣೆಗಳು ತಿಳಿಸುತ್ತವೆ. ಹಾಗಾಗಿ, ಪ್ರತಿಯೊಂದು ಗ್ರಾಮದಲ್ಲಿರುವ ಪ್ರಜ್ಞಾವಂತರು ತಮ್ಮ ಗ್ರಾಮದ ನಂದಿ ಸಂಪತ್ತನ್ನು ಹೆಚ್ಚಿಸುವುದಕ್ಕಾಗಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಳಸಿಕೊಳ್ಳಲು ವಿನಂತಿಸಲಾಗುತ್ತಿದೆ ಎಂದರು. ಕೊನೆಯಲ್ಲಿ ನಂದಿಗಾಗಿ ಮತ ಮೀಸಲಿಡುವ ಕುರಿತು ಸಂಕಲ್ಪ ವಿಧಿಯನ್ನು ರೈತರಿಗೆ ಭೋದಿಸಲಾಯಿತು.
ಬೋರಣಾಪುರ ಗ್ರಾಮದ ಹಿರಿಯರಾದ ಶ್ರೀ ಭೀಮರಾಯ ತಿ ಪೂಜಾರಿ, ಜಕ್ಕರಾಯ ಮ ಪೂಜಾರಿ, ಬನಪ್ಪ ಸಿ ಪುಟ್ಟಿ, ಶ್ರೀಶೈಲ ಹಿಟ್ನಳ್ಳಿ, ಮಲ್ಲಿಕಾರ್ಜುನ ಅಲಿಯಾಬಾದ, ಸಿದ್ದಪ್ಪ ಲೋಗಾವಿ, ನಿಂಗಪ್ಪ ಯಲ್ಲಪ್ಪ ಪೂಜಾರಿ, ಈಶ್ವರ ಸಿದ್ದಪ್ಪ ಪೂಜಾರಿ, ಗುರುಲಿಂಗಪ್ಪ ಹಿಟ್ನಳ್ಳಿ, ಭೀರಪ್ಪ ಪೂಜಾರಿ ಹಾಗೂ ಹಣಮಂತ ಕಾಡೆ ಭಾಗವಹಿಸಿದ್ದರು. ನಂದಿ ಕೂಗು ಅಭಿಯಾನದ ಸ್ವಯಂ ಸೇವಕರಾದ ಶ್ರೀ ಬಸವರಾಜ ಕೋನರಡ್ಟಿ, ಅಭಿಷೇಕ ಬಿರಾದಾರ, ಹೆಗಡಿಹಾಳದ ಬಸವರಾಜ ಬಿರಾದಾರ ಹಾಗೂ ಇತರರು ಭಾಗವಹಿಸಿದ್ದರು.



















