ಮೆಗಾ ಮಾರ್ಕೆಟ್ಗೆ ಪರ್ಯಾಯ ಕನ್ನಡ ಪದಬಳಕೆಗೆ ಆಗ್ರಹ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರ್ನಲ್ಲಿ ಪುರಸಭೆ ವತಿಯಿಂದ ಸರ್ಕಾರದ ೧೫ ಕೋಟಿ ರೂ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ವಾಣ ಜ್ಯ ಮಳಿಗೆ ಸಂಕೀರ್ಣಕ್ಕೆ ಪುರಸಭೆಯವರು ಮೆಗಾ ಮಾರ್ಕೆಟ್ ಎನ್ನುವ ಇಂಗ್ಲೀಷ್ ಪದಬಳಕೆ ಮಾಡತೊಡಗಿದ್ದಾರೆ. ಇದನ್ನು ಕೈಬಿಟ್ಟು ಪರ್ಯಾಯ ಕನ್ನಡ ಪದ ಬಳಕೆ ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಸಂಘ ಸಂಸ್ಥೆಗಳ ಪ್ರತಿನಿಧಿ ಸದಸ್ಯ ಕಿರಣರಾಜ ಪಾಟೀಲ, ಕನ್ನಡಾಭಿಮಾನಿ ತಾಜುದ್ದೀನ್ ಕರ್ಜಗಿ ವಕೀಲರು ಪೌರಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆಬ್ರವರಿ ೨೮ರಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಊರಿನ ಗಣ್ಯರ ಸಮ್ಮುಖ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವಾಗ ಸರ್ಕಾರಿ ಪ್ರೊಟೊಕಾಲ್ ಪ್ರಕಾರ ಮುದ್ರಿಸಿದ್ದ ಆಮಂತ್ರಣ ಪತ್ರಿಕೆಯಲ್ಲೂ ಮೆಗಾ ಮಾರ್ಕೆಟ್ ಎಂದೇ ಬಳಸಲಾಗಿತ್ತು. ಜೊತೆಗೆ ಎಲ್ಲ ಬ್ಯಾನರುಗಳಲ್ಲಿ, ಭಾಷಣಗಳಲ್ಲಿ ಇವೇ ಶಬ್ಧಗಳನ್ನು ಬಳಸಲಾಗಿತ್ತು. ಕನ್ನಡ ನಾಡಿನಲ್ಲಿರುವ ನಮಗೆ ಕನ್ನಡ ಆಡಳಿತ ಭಾಷೆಯಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಇದಕ್ಕೆ ಸ್ಪಂಧಿಸಿ ಸರ್ಕಾರ ಹಲವಾರು ಸುತ್ತೋಲೆಗಳನ್ನೂ ಹೊರಡಿಸಿ ಕನ್ನಡ ಬಳಕೆ ಕಡ್ಡಾಯಗೊಳಿಸಿದೆ. ಇದಲ್ಲದೆ ಫೆಬ್ರವರಿ ೧೫ರಂದು ಸುತ್ತೋಲೆಯೊಂದನ್ನು ಹೊರಡಿಸಿ ಕರ್ನಾಟಕ ರಾಜ್ಯದ ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಹೆಸರನ್ನು ಮುದ್ರಿಸುವಂತೆಯೂ ನಿರ್ದೇಶಿಸಲಾಗಿದೆ. ವಾಸ್ತವ ಹೀಗಿರುವಾಗ ಸರ್ಕಾರದ ಭಾಗವಾಗಿರುವ ಪುರಸಭೆ ಆಡಳಿತದವರು ಕನ್ನಡ ಬಳಕೆ ಮಾಡುವುದರ ಬದಲು ಇಂಗ್ಲೀಷ್ ಬಳಕೆ ಮಾಡಿದ್ದು ತಪ್ಪು. ಈಗಲೂ ಕಾಲ ಮಿಂಚಿಲ್ಲ. ಮುಂದಿನ ದಿನಗಳಲ್ಲಿ ಮಳಿಗೆಗೆ ಹೆಸರು ಇಡುವಾಗ, ಉದ್ಘಾಟನೆ ಸಂದರ್ಭ ಪರ್ಯಾಪ ಕನ್ನಡ ಪದಗಳ ಬಳಕೆ ಕಡ್ಡಾಯವಾಗಿ ಮಾಡಲು ಈಗಲೇ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿದೆ. ಹಿಂದೆ ೩ ಜಿಲ್ಲಾ, ೪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಕೀರ್ತಿ ಇಲ್ಲಿನವರಿಗಿದೆ. ಕನ್ನಡಪರ ಸಂಘಟನೆಗಳು ಕನ್ನಡ ಪ್ರೇಮ ತೋರಿಸಲು ಪೌರಾಡಳಿತಕ್ಕೆ ಈ ಕುರಿತು ಸಲಹೆ ಅಥವಾ ಮನವಿ ಮೂಲಕ ಆಗ್ರಹಿಸಿ ಬೆಂಬಲಕ್ಕೆ ನಿಲ್ಲುವ ಮೂಲಕ ಕನ್ನಡಕ್ಕೆ ಹೆಚ್ಚಿನ ಮನ್ನಣೆ ದೊರಕಿಸಿಕೊಡಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶ್ರವಣಬೆಳಗೊಳದಲ್ಲಿ ನಡೆದಿದ್ದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಸೇರಿ ಅನೇಕರಿಗೆ ನಾನು ಮಿನಿ ವಿಧಾನಸೌಧದಲ್ಲಿನ ಮಿನಿ ಇಂಗ್ಲೀಷ್ ಪದಕ್ಕೆ ಪರ್ಯಾಯ ಪದಬಳಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೆ. ಕಸಾಪದ ಆಗಿನ ರಾಜ್ಯಾಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿ ಹಲವರಿಗೆ ಪತ್ರವನ್ನೂ ನೀಡಿದ್ದೆ. ಸಂಘಟನಾತ್ಮಕ ಒತ್ತಾಯದ ಪರಿಣಾಮ ಮುಂದಿನ ವರ್ಷಗಳಲ್ಲಿ ಸರ್ಕಾರ ಮಿನಿ ವಿಧಾನಸೌಧವನ್ನು ತಾಲೂಕು ಆಡಳಿತ ಸೌಧ ಎಂದು ಬದಲಾಯಿಸಿ ಇಂಗ್ಲೀಷ್ನ ಮಿನಿ ಪದ ಬಳಕೆ ಕೈಬಿಟ್ಟಿತು ಎಂದು ಕಿರಣರಾಜ ಪಾಟೀಲ ತಮ್ಮ ಸಾತ್ವಿಕ ಹೋರಾಟಕ್ಕೆ ಸಂದ ಜಯದ ಕುರಿತು ಮಾಹಿತಿ ಹಂಚಿಕೊಡರು.


















