ಲಿಂಗಸೂಗೂರು: ಪ್ರಕೃತಿಯಿಂದ ಮನುಷ್ಯ ಹೊರತಾಗಿಲ್ಲ. ಪ್ರಕೃತಿಯೊಂದಿಗೆಯೇ ನಮ್ಮೆಲ್ಲರ ಜೀವನ ಅಂಟಿಕೊಂಡಿದೆ ಹಾಗಾಗಿ ಪ್ರಕೃತಿಯಲ್ಲಿನ ಬದಲಾವಣೆಗಳೊಂದಿಗೆ ನಮ್ಮದೇಹದಲ್ಲಿನ ಆರೋಗ್ಯವು ಬದಲಾಗುತ್ತದೆ. ಹಾಗಾಗಿ ಮೃಗಶಿರ ಮಳೆ ಪ್ರಾರಂಭವಾಗುವ ಸಂದರ್ಭದಲ್ಲಿ ಕೆಲವೊಂದು ಆರ್ಯುವೇದದ ಔಷಧಿಗಳನ್ನ ಬಳಸುವ ಪರಿಪಾಠ ಚಾಲ್ತಿಯಲ್ಲಿದೆ ಎಂದು ಗುರುಗುಂಟಾ ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ವಿ. ಗಂಗಾಧರಯ್ಯ ಸ್ವಾಮಿ ಹೇಳಿದರು.
ಕಸಬಾ ಲಿಂಗಸುಗೂರು ಗ್ರಾಮದ ಶ್ರೀ ಕುಪ್ಪಿ ಭೀಮ
ದೇವಸ್ಥಾನದಲ್ಲಿ ವೈದ್ಯ ಸಂಗಣ್ಣ ಗ್ರಾಮೀಣ ಆರೋಗ್ಯಾಭಿವೃದ್ದಿ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೃಗಶಿರ ಮಳೆ ನಕ್ಷತ್ರ ಪ್ರಯುಕ್ತ ದಮ್ಮು, ಕೆಮ್ಮು, ಉಬ್ಬಸ, ಅಸ್ತಮಾ, ಅಲರ್ಜಿ ರೋಗಗಳಿಗೆ ಉಚಿತ ಮಾತ್ರೆ ಹಾಗೂ ರೋಗ ನಿರೋಧಕ ಕಷಾಯ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸಿ ರೋಗಿಗಳಿಗೆ ಮಾತ್ರೆ ಮತ್ತು ಕಷಾಯವನ್ನ ವಿತರಿಸಿ ಮಾತನಾಡಿದರು. ಮಿರಗಾ ಕೂಡುವುದು ಅಥವಾ ಮಿರಗಾ ಎಂದೆ ಪ್ರಚಲಿತವಿರುವ ಮೃಗಶಿರ ನಕ್ಷತ್ರದ ಪ್ರವೇಶವನ್ನ ನಮಗೆ ಗೊತ್ತಿಲ್ಲದೇ ನಾವೆಲ್ಲರೂ ಆಚರಿಸಿಕೊಂಡು ಬಂದಿದ್ದೇವೆ. ಸಾಮಾನ್ಯವಾಗಿ ಈ ಮಳೆ ಪ್ರಾರಂಭದಲ್ಲಿ ನಮ್ಮ ವಾತಾವರಣದಲ್ಲಿರುವ ಪರಿಸರವೆಲ್ಲಾ ತಂಪಾಗುತ್ತದೆ. ಹಾಗಾಗಿ ಇಂಗು ಮತ್ತು ಬೆಲ್ಲವನ್ನ ತಿನ್ನುವ ಮೂಲಕ ನಮ್ಮ ಪೂರ್ವಜರು ದೇಹದ ಊಷ್ಣವನ್ನ ಹೆಚ್ಚು ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಆರ್ಯುವೇದದ ವೈದ್ಯರು ಜನರಲ್ಲಿ ಉಷ್ಣ ಹೆಚ್ಚು ಮಾಡುವದರ ಜೊತೆಗೆ ಇನ್ನು ಕೆಲವು ಔಷಧಿ ಗುಣವುಳ್ಳ ಪದಾರ್ಥಗಳನ್ನ ಸೇರಿಸಿ ಮಾತ್ರೆ ಮತ್ತು ಕಷಾಯದ ರೀತಿಯಲ್ಲಿ ನೀಡುತ್ತಾರೆ. ಅದನ್ನೆ ನಮ್ಮ ವೈದ್ಯ ಕುಮಾರ ಸ್ವಾಮಿಯವರು ಜನರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ. ಎಲ್ಲರೂ ಈ ಔಷಧಿಯನ್ನ ಸೇವಿಸುವದರ ಮೂಲಕ ಇದರ ಸದುಪಯೋಗವನ್ನ ಪಡೆದುಕೊಳ್ಳಿರಿ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನ ಪುರಸಭೆ ಅಧ್ಯಕ್ಷರಾದ ಸುನಿತಾ ಕೆಂಭಾವಿಯವರು ನೇರವೇರಿಸಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಮಹ್ಮದ ರಫೀ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣೀ, ಟ್ರಸ್ಟ್ನ ಗೌರವಾಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪುರಸಭೆ ಸದಸ್ಯರುಗಳಾದ ಮುದುಕಪ್ಪ ನಾಯಕ, ಬಸವರಾಜ ಯತಗಲ್,, ಶರಣಪ್ಪ ಬಿಜೆಪಿ ಮುಖಂಡ ಪರಶುರಾಮ ಕೆಂಭಾವಿ, ಟ್ರಸ್ಟ್ನ ಅಧ್ಯಕ್ಷ ವೈದ್ಯ ಕುಮಾರಸ್ವಾಮಿ, ಪಾರಂಪರಿಕ ಪಶು ವೈದ್ಯ ಶಂಕರಪ್ಪ ಮಜ್ಜಿಗಿ, ಶರಣಬಸವ ಈಚನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.