ಕೆಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು :ತಾಲೂಕಿನ ಕೌದಳ್ಳಿ ಗ್ರಾಮದ ಹೊರವಲಯದಲ್ಲಿ ಇಂದು ಸಂಜೆ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಘಟನೆ ವಿವರ :ಕೌದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೀಟರ್ ಟೌನ್ ನಲ್ಲಿ ವಾಸವಿರುವ ಪ್ರಭಾಕರ್ ಅಂತೋಣಿ ರವರ ಮಗ ಜೀವನ್(18 ವರ್ಷ) ಎಂದು ತಿಳಿದು ಬಂದಿದೆ. ಈತ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಲೆ ಮಾದೇಶ್ವರ ಬೆಟ್ಟದಿಂದ ಅತಿ ವೇಗವಾಗಿ ಬರುತ್ತಿದ್ದಂತಹ ಸಾರಿಗೆ ಸಂಸ್ಥೆಯ ಬಸ್ ಬೇರೊಂದು ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಅಲ್ಲಿದ್ದಂತಹ ಸ್ಥಳೀಯರು ಆರೋಪಿಸಿದ್ದಾರೆ ಹಾಗೂ ಕೆಲಕಾಲ ಪ್ರತಿಭಟನೆಯೂ ಕೂಡ ಉಂಟಾಗಿದೆ. ತಕ್ಷಣ ಸುದ್ದಿ ತಿಳಿದ ರಾಮಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.



















