ಗೋನಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿತ: ಹಳೆಯ ಕಟ್ಟಡದ ದುಸ್ಥಿತಿಗೆ ಸ್ಥಳೀಯರ ತೀವ್ರ ಆಕ್ರೋಶ.
————
ಪಾಠ ನಡೆಯುತ್ತಿದ್ದಾಗಲೇ ಕುಸಿದ ಶಾಲೆಯ ಹೊರಭಾಗದ ಮೇಲ್ಚಾವಣಿ: ವಿದ್ಯಾರ್ಥಿಗಳು, ಶಿಕ್ಷಕರು ಪಾರು”
ತರಗತಿ ನಡೆಯುತ್ತಿದ್ದಾಗಲೇ ಕುಸಿಯಿತು ಶಾಲೆಯ ಹೊರಭಾಗದ ಮೇಲ್ಚಾವಣಿ: ಭಾರಿ ಅನಾಹುತ ತಪ್ಪಿದ ಪವಾಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ ಜಿಲ್ಲೆ.
ಮುದ್ದೇಬಿಹಾಳ: ತಾಲೂಕಿನ ಪಿ.ಎನ್. ಗೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ, ಶಾಲೆಯ ಮುಂಭಾಗದ ಹೊರಗಿನ ಮೇಲ್ಚಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸದೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾರಾಗಿದ್ದಾರೆ.
ಘಟನೆಯ ವಿವರ:
ಮಂಗಳವಾರ ಎಂದಿನಂತೆ ಶಾಲೆಯಲ್ಲಿ ಬೋಧನೆ ನಡೆಯುತ್ತಿದ್ದಾಗ, ದೊಡ್ಡ ಶಬ್ದದೊಂದಿಗೆ ಮೇಲ್ಚಾವಣಿಯ ಒಂದು ಭಾಗ ನೆಲಕ್ಕುರುಳಿದೆ. ವಿಷಯ ತಿಳಿದು ತಕ್ಷಣವೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಎಚ್.ಆರ್. ಪತ್ತಾರ್ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, “ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಕರಿಗೆ ಅಪಾಯವಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ತಿಳಿಸಿದ್ದಾರೆ. ಪಕ್ಕದ ಕೊಠಡಿಯಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕ ಕೆ.ಎನ್. ಸುರಪುರ ಕೂಡ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಭೇಟಿ ಮತ್ತು ಕ್ರಮ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹಾಗೂ ಪಿಡಿಓ ಮಲ್ಲಿಕಾರ್ಜುನ ಕೋರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದ ಸ್ಥಿತಿಗತಿಯ ಕುರಿತು ತಾಂತ್ರಿಕ ತಜ್ಞರು ಹಾಗೂ ಇಂಜಿನಿಯರ್‌ಗಳಿಂದ ವರದಿ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯ ತರಗತಿಗಳನ್ನು ಗ್ರಾಮದ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಗ್ರಾಮಸ್ಥರ ಆರೋಪ:
ಶಾಲೆಯ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಕೇವಲ ಸುಣ್ಣ-ಬಣ್ಣ ಬಳಿದು ಸೌಂದರ್ಯೀಕರಣ ಮಾಡಲಾಗುತ್ತಿದೆಯೇ ಹೊರತು ಕಟ್ಟಡದ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವು ಕೊಠಡಿಗಳ ಸೀಲಿಂಗ್ ಉಬ್ಬಿಕೊಂಡಿದ್ದು, ಯಾವಾಗ ಬೇಕಾದರೂ ಕುಸಿಯುವ ಆತಂಕವಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕುಡಿಯುವ ನೀರು ಮತ್ತು ಶೌಚಾಲಯದ ಕೊರತೆ ಹಾಗೂ ಅಸ್ವಚ್ಛತೆಯಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಈ ಸಂದರ್ಭದಲ್ಲಿ ಸಿಆರ್‌ಪಿ ಎನ್.ಬಿ. ಬಿರಾದಾರ್, ಶಿಕ್ಷಕರಾದ ಎಸ್.ಎಂ. ಕಾಶಿಣಕುಂಟಿ, ಕೆ.ಎನ್. ಸುರಪುರ, ರುದ್ರಮ್ಮ, ಎಪಿಜೆ ಅಬ್ದುಲ್ ಕಲಾಂ ಯುವ ಸೈನ್ಯದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು