ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಕೋಳೂರು, ತಂಗಡಗಿ ಭಾಗದ ವಿಜಯನಗರ ಕಾಲದ ಐತಿಹಾಸಿಕ ದೇವಸ್ಥಾನಗಳನ್ನು ಪುನರುಜ್ಜೀವನ ಮಾಡಲು ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದ್ದು ಜಿಲ್ಲಾ, ತಾಲೂಕ ಅಧಿಕಾರಿ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಸಬೇಕು ಎಂದು ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ಸಂಚಾಲಕ, ನ್ಯಾಯವಾದಿ ಪರಮೇಶ ಮಾತಿನ ರಾಜ್ಯ ಸರಕಾರವನ್ನು ಆಗ್ರಹ ಮಾಡಿದ್ದಾರೆ.
ಈ ಕುರಿತು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಐತಿಹಾಸಿಕ ತ್ರಿಕೋಟೇಶ್ವರ ದೇವಾಲಯ, ತಾಳಿಕೋಟಿ ಯುದ್ಧದ ಕೋಳೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನ, ಅಳಿಯ ರಾಮರಾಯನ ಗದ್ದುಗೆ, ರಣರಂಗದ ಕುರುಹುಗಳು ಹಾಗೂ ಶಾಸನಗಳು ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಬೆಳೆಸುವ ಜೀರ್ಣೋದ್ಧಾರ ಯೋಜನೆ ಪ್ರಕಟಿಸಿರುವ ಪ್ರವಾಸೋದ್ಯಮ ಇಲಾಖೆಯ ಎಚ್ ಕೆ ಪಾಟೀಲ್ ಹಾಗೂ ಶಾಸಕ ಸಿ ಎಸ್ ನಾಡಗೌಡ ಅವರ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಐತಿಹಾಸಿಕ ಸ್ಥಳಗಳು ಅತ್ಯಂತ ಸೂಕ್ಷ್ಮತೆ ಹಾಗೂ ಸಂಪತ್ತಿನ ಕುರಿತು ಬಹಳಷ್ಟು ಚರ್ಚೆಗಳು ಇದ್ದು ಅದು ಸರಕಾರಕ್ಕೆ ಸೇರಬೇಕು ಹೀಗಾಗಿ ಉತ್ಕನನ ಕಾರ್ಯ ಪಾರದರ್ಶಕವಾಗಿ ಮಾಡಬೇಕು ಎಂದು ತಮ್ಮ ಕೋರಿದ್ದಾರೆ.
ನ್ಯಾಯವಾದಿ ಪ್ರಭುಗೌಡ ಗೌಡರ ಮಾತನಾಡಿ, ಈ ಪ್ರದೇಶದಲ್ಲಿ ಐತಿಹಾಸಿಕ ಕುರುಹುಗಳು, ಶಿಲಾಶಾಸನ, ಸಮಾಧಿ ಹಾಗೂ ಸಂಪತ್ತಿನ ಕುರಿತು ಊಹಾಪೋಹಗಳಿದ್ದು ಪುರಾತನ ದೇಗುಲಗಳನ್ನು ರಕ್ಷಿಸುವುದರ ಜೊತೆಗೆ ವಿಷಯದ ಸೂಕ್ಷ್ಮತೆ ಎಲ್ಲರಿಗೂ ತಿಳಿಯುವಂತೆ ಮಾಡಲು ಪ್ರಯತ್ನ ಮಾಡಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ಮಾಡಿ ಅವರ ಸಮಕ್ಷಮದಲ್ಲಿ ಉತ್ಕನನ ಕಾರ್ಯ ನಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಖಂಡರಾದ ಬಿ ಎ ಪಾಟೀಲ್. ಎಸ್ ಜಿ ಅಂಗಡಿ. ಶರಣಗೌಡ ಒನಕ್ಯಾಳ ಸೇರಿದಂತೆ ಉಪಸ್ಥಿತರಿದ್ದರು.