ಇಂಡಿ : ನನ್ನ ಮೊದಲ ಹರ್ಕ್ಯುಲಸ್ ಸೈಕಲ್ ಏಳು ಬೀಳುಗಳು ಜೀವನದ ಅವಿಭಾಜ್ಯ ಅಂಗಗಳೆಂದು ಜೀವನದ ಪಾಠ ಕಲಿಸಿತ್ತು. ನಾನು ತಂದೆಯಿಂದ ಪಡೆದ ಮೊದಲ ಉಡುಗೊರೆ ಒಂದು ಸೈಕಲ್. ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ನನಗೆ ನಮ್ಮ ತಂದೆ ಒಂದು ಸೈಕಲ್ ಕೊಡಿಸಿದ್ದರು. ನಾನು ಅದನ್ನು ಚಲಾಯಿಸುವಾಗ ಬಹಳಷ್ಟು ಬಾರಿ ಬಿದ್ದೆ. ಆದರೆ ಪ್ರತಿ ಬಾರಿ ಬಿದ್ದಾಗಲೂ ಏಳುವುದನ್ನು ಮರೆಯಲಿಲ್ಲ! ತೋಟದ ವಸ್ತಿಯಿಂದ ಶಾಲೆಗೆ ಬರುತ್ತಿದ್ದ ನನಗೆ ಅದು ಮೊದಲ ವಾಹನವೂ ಆಗಿತ್ತು. ಅಂದಹಾಗೆ ಇಂದು ಜೂನ್ 3 ವಿಶ್ವ ಬೈಸಿಕಲ್ ದಿನ. ಈಗೀಗ ಪ್ರತಿಯೊಂದು ಸಂಗತಿಗಳಿಗೂ ದಿನಗಳ ರೂಪದಲ್ಲಿ ಆಚರಣೆಗಳು ಬಂದಿವೆ. ಆದರೆ ಮನುಷ್ಯನ ಬದುಕು ಒಂದು ಸೈಕಲ್ ಸವಾರಿಯೇ ಆಗಿದೆ. ಜೀವನವೂ ಒಂದು ಸೈಕಲ್ ಸವಾರಿಯಂತೆಯೆ, ಬದುಕಿನ ಬಂಡಿಯು ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ನಾವು ಜೀವನದಲ್ಲಿ ಚಲನಶೀಲರಾಗಿರಲೇಬೇಕು. ಈ ಸೈಕಲ್ ಸವಾರಿಯಿಂದ ಮನುಷ್ಯನಿಗೆ ಹಲವಾರು ಪ್ರಯೋಜನಗಳಿವೆ.ದೈಹಿಕ ಸದೃಢತೆ, ಮಾನಸಿಕ ಸ್ಥಿಮಿತತೆ, ಸಂಪೂರ್ಣ ವ್ಯಾಯಾಮಕ್ಕೆ ಸೈಕಲ್ ಸವಾರಿ ಹೇಳಿಮಾಡಿಸಿದ ದೈಹಿಕ ಕಸರತ್ತಾಗಿದೆ. ಈ ಸೈಕಲ್ ಸವಾರಿ ಅತ್ಯಂತ ಉಲ್ಲಸದಾಯಕ ಮತ್ತು ಸಂಭ್ರಮದ ಚಟುವಟಿಕೆಗಳಲ್ಲಿ ಒಂದಾಗಿದೆ. ಇದು ದೇಹವನ್ನು ಸರ್ವವಿಧದಲ್ಲೂ ಸದೃಢವಾಗಿಡಲು ಮತ್ತು ರೋಗಮುಕ್ತವಾಗಿಡಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಸುಸ್ಥಿರತೆ ಹೊಂದಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಸೈಕಲ್ ಸವಾರಿಯು ಒಂದು ಸ್ಪಚ್ಛ, ಪರಿಸರಸ್ನೇಹಿ, ವೆಚ್ಚರಹಿತ ಸಾರಿಗೆಯ ಸಾಧನವಾಗಿದೆ. ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಇತ್ಯಾದಿಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಇದು ವಿಶ್ವಸಾರಿಗೆಯ ಒಂದು ಸುಂದರ ಅಂಗವಾಗಿದೆ.ಈ ಸವಾರಿ ಎರಡು ಚಕ್ರಗಳ ಮೇಲಿನ ಅತ್ಯಂತ ಸುಂದರ ಪ್ರವಾಸವಾಗಿರುತ್ತದೆ ! ಪ್ರಸ್ತುತ ಜೀವನದ ಸತಿಪತಿಗಳೆಂಬ ಚಕ್ರಗಳು ಸೈಕಲನ್ನು ನೋಡಿ ಕಲಿಯುವುದು ಬಹಳಷ್ಟಿದೆ! ಬದುಕಿನಲ್ಲಿ ನಾವು ಕೆಲವೊಮ್ಮೆ ವಿಫಲವಾಗಬಹುದು, ದುಃಖಿಗಳಾಗಬಹುದು, ನಿರಾಸೆಗಳನ್ನು ಎದುರುಗೊಳ್ಳಬಹುದು ಆದರೆ ನಿಂತಲ್ಲೇ ನಿಲ್ಲದೆ, ಅಲ್ಲಿಂದ ಮುಂದೆ ಚಲಿಸಿದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸು ಪಡೆಯಬಹುದು. ನಾವು ಬೀಳುತ್ತೇವೆ ಆದರೆ ಏಳುವುದನ್ನು ಮರೆಯಬಾರದು! ನಾವು ವಿಫಲರಾಗುತ್ತೇವೆ ಆದರೆ ಪ್ರಯತ್ನಿಸುವದನ್ನು ನಿಲ್ಲಿಸಬಾರದು. ಇದು ಸೈಕಲ್ ಸವಾರಿ ನಮಗೆ ಕಲಿಸುವ ಪಾಠವಾಗಿದೆ. ಇಂದು ವಿಶ್ವ ಸೈಕ್ಲಿಂಗ್ ದಿನಕ್ಕೆ ಮಾತ್ರ ಸೈಕಲ್ ಸವಾರಿ ಸೀಮಿತವಾಗದೆ ಪ್ರತಿದಿನವೂ ಇದು ಹವ್ಯಾಸವಾದಾಗ ಮಾತ್ರ ಬದುಕಿಗೆ ಒಂದಷ್ಟು ಪ್ರಯೋಜನಗಳು ಖಂಡಿತವಾಗಿಯೂ ಒದಗಿ ಬರುತ್ತದೆ.
ಬನ್ನಿ ಬಾಲ್ಯದ ಸೈಕಲ್ ಸ್ನೇಹಿತರೊಂದಿಗೆ ಒಂದು ಸೈಕಲ್ ಪ್ರವಾಸ ಮಾಡೋಣ. ಸೈಕ್ಲಿಂಗ್ ಮಹತ್ವ ತಿಳಿಸೋಣ.
ಧನರಾಜ ಮುಜಗೊಂಡ ಲಚ್ಯಾಣ
ಅರಣ್ಯಾಧಿಕಾರಿ, ಹವ್ಯಾಸಿ ಬರಹಗಾರರು ಇಂಡಿ