ತ್ರಿಪದಿಗಳಿಂದ ಸಮಾಜಕ್ಕೆ ಬೆಳಕಾದ ಸರ್ವಜ್ಞ- ಸಂತೋಷ ಬಂಡೆ
ಇಂಡಿ: ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ಮಾತಿಲ್ಲ ಎಂಬಂತೆ ಸಮಾಜದ ಉದ್ಧಾರಕ್ಕಾಗಿ ಪ್ರತಿ ವಿಷಯ-ಸಂಗತಿ ಮೇಲೆ ವಚನಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರ ತ್ರಿಪದಿಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಹಸನಾಗಿಸಿಕೊಳ್ಳುವಂತೆ ಶಿಕ್ಷಕ ಸಂತೋಷ ಬಂಡೆ ತಿಳಿಸಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರದಂದು ಹಮ್ಮಿಕೊಂಡ ಕವಿ ಸರ್ವಜ್ಞರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಸರ್ವಜ್ಞ ಸೌಜನ್ಯಶೀಲ, ಗೌರವದ ಬದುಕನ್ನು ಸಾಗಿಸಿ,
ಸಮಾಜ ತಿದ್ದುವ ಕೆಲಸ ಮಾಡುತ್ತಾ, ಹಳ್ಳಿಯ ಜಾನಪದ ಭಾಷಾ ಶೈಲಿಯಲ್ಲಿ, ಸಾಮಾನ್ಯ ಜನರಿಗೆ ಮನವರಿಕೆ ಆಗುವ ರೀತಿಯಲ್ಲಿ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳನ್ನು ಇಂದಿನ ಮಕ್ಕಳು, ಯುವಜನಾಂಗ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯಾತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆ. ಅವರು ಸರಳ, ಆದರ್ಶ, ಸುಂದರ ಸಮಾಜವನ್ನು ನಿರ್ಮಿಸಲು ನಿರಂತರ ಶ್ರಮಿಸಿದ್ದರು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.