ಅಫಜಲಪುರ: ತಾಲೂಕಿನ ಜೇವರ್ಗಿ(ಬಿ) ಗ್ರಾಮದ ರೈತರೊಬ್ಬರ ಜಮೀನಿಗೆ ಸಂಬಂಧಪಟ್ಟಂತೆ ಮ್ಯುಟೇಶನ್ ತಿದ್ದುಪಡಿಗಾಗಿ 5 ಸಾವಿರ ರೂ. ಬೇಡಿಕೆಯಿಟ್ಟು ಫೋನ್ ಪೇ ಮುಖಾಂತರ ಹಣ ಪಡೆಯುವ ಸಂದರ್ಭದಲ್ಲಿ ಮಹಾಬಲೇಶ್ವರ ಕಂಬಾರ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಅಫಜಲಪುರ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಪಿಎಸ್ಐ ಬಾಬಾಸಾಹೇಬ ಪಾಟೀಲ್ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಫಯೂಮ, ಯಮನೂರಪ್ಪ, ಪ್ರದೀಪ ಕುಮಾರ, ಶರಣಬಸವ, ಬಂದೇನವಾಜ ಇದ್ದರು.
ಜನಸಾಮಾನ್ಯರ ಕಚೇರಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಕೆಲ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ತಹಸೀಲ್ ಕಚೇರಿಯ ಕೆಲ ಸಿಬ್ಬಂದಿ ವರ್ಗವು ತಮ್ಮ ಜೇಬು ತುಂಬಿಸಿಕೊಳ್ಳಲು ಸುಖಾಸುಮ್ಮನೆ ಹಿರಿಯ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಲಂಚ ಪಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಇಂತಹ ಇನ್ನುಳಿದ ಭ್ರಷ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಇಲಾಖೆಯ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.