ವಿಶ್ವ ಗುಬ್ಬಚ್ಚಿ ದಿನ
ಪಕ್ಷಿ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ-ಸಂತೋಷ ಬಂಡೆ
ಇಂಡಿ: ಪರಿಸರ ಹಾಗೂ ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಂದು ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ನಾಶದ ಅಂಚಿನಲ್ಲಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದ್ದು, ಅವುಗಳ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ವಿಶ್ವ ಗುಬ್ಬಚ್ಚಿ ದಿನದ ಪ್ರಯುಕ್ತ ‘ಪಕ್ಷಿ ಸಂಕುಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳ ಉಳಿವಿಗಾಗಿ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ಮತ್ತು ಮೇಲ್ಛಾವಣಿ ಮೇಲೆ ನೀರು ತುಂಬಿದ ತಟ್ಟೆಗಳನ್ನು ಇಟ್ಟು ಪಕ್ಷಿ ಸಂಕುಲದ ಸಂರಕ್ಷಣೆಗೆ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಮನುಷ್ಯನ ಜೀವನ ಪ್ರಕೃತಿಯಲ್ಲಿಯೇ ಅಡಗಿದೆ. ಆದರೆ, ನಾವಿಂದು ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ಪ್ರಕೃತಿ ವಿನಾಶ ಮಾಡುತ್ತಿದ್ದೇವೆ. ಇಂದಿನ ಮಕ್ಕಳಲ್ಲಿ ಪರಿಸರ-ಪಕ್ಷಿ ಸಂಕುಲ ಸಂರಕ್ಷಣೆಯ ಅರಿವು ಮೂಡಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿರುವ ಗಿಡಮರಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಯಿತು.