ಇಂಡಿ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಇಂಡಿ ತಾಲೂಕು ಸಮಿತಿ ಇವರ ಆಶ್ರಯದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಯವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಗ್ರಾಮ ಪಂಚಾಯತ್ ನೌಕರರ ಬಾಕಿ ವೇತನಕ್ಕಾಗಿ ಎರಡು ಬಾರಿ ಮನವಿ ಸಲ್ಲಿಸಿದ್ದೆವೆ. ಆದರೆ ಇಲ್ಲಿಯವರೆಗೆ ಕೆಲವು ಗ್ರಾಮ ಪಂಚಾಯತ್ ನೌಕರರಿಗೆ ಇನ್ನೂ ವೇತನ ಪಾವತಿಸಿಲ್ಲ. ಇನ್ನೂ ೧೫ ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಸುತ್ತೊಲೆಯಲ್ಲಿ ತಿಳಿಸಿರುವಂತೆ ವೇತನ ಪಾವತಿಯಾಗದೇ ಹಾಗೇ ಉಳಿದಿರುತ್ತದೆ. ಇನ್ನು ಸ್ವಂತ ಸಂಪನ್ಮೂಲದಲ್ಲಿ ಶೇಕಡಾ ೪೦% ರಷ್ಟು ವೇತನ ಪಾವತಿಸಲು ಆದೇಶವಿದ್ದರೂ ಕೆಲ ಗ್ರಾಮ ಪಂಚಾಯತ್ ಗಳಲ್ಲಿ ಇನ್ನೂ ವೇತನ ಪಾವತಿಸಿರುವುದಿಲ್ಲ. ಕೂಡಲೇ ಬಾಕಿ ವೇತನ, ಅನುಮೋದನೆಯಾಗದೇ ಬಾಕಿ ಉಳಿದ ನೌಕರರಿಗೂ ಅನುಮೋದನೆ ನೀಡವುದು, ಎಲ್ಲಾ ನೌಕರರಿಗೆ ಇ.ಎಪ್.ಎಮ್.ಎಸ್ ನಲ್ಲಿ ಅಳವಡಿಸಿ, ನಿವೃತ್ತ ನೌಕರರಿಗೆ ಉಪದಾನ ಒದಗಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ತುಕಾರಾಮ ಮಾರನೂರ, ಕಾರ್ಯದರ್ಶಿ ಲಾಲಾಹ್ಮದ ಶೇಖ, ಲಕ್ಷ್ಮಣ್ಣ ಪಾಟೀಲ್ ಹಾಗೂ ನೌಕರರು ಉಪಸ್ಥಿತರು.