ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆ ಸ್ಮರಣೀಯ: ಸಂತೋಷ ಬಂಡೆ
ಇಂಡಿ: ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ. ಭಾರತದ ಕಲೆ ಸಂಸ್ಕೃತಿ ಪರಂಪರೆ ಶ್ರೀಮಂತವಾಗಲು ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರ. ವಿಶ್ವಕರ್ಮ ಉಳಿದರೆ ಸಂಸ್ಕೃತಿ ಕಲೆ ಪರಂಪರೆ ಉಳಿಯಲಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಬುಧವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಸ್ತುವಿಗೆ ಆಕೃತಿ, ರೂಪವನ್ನು ನೀಡಿ, ವಿಶ್ವವೇ ಇತ್ತ ನೋಡುವಂತೆ ಮಾಡಿ, ವಿಶ್ವಕ್ಕೆ ಸುಂದರ ರೂಪವನ್ನು ಕೊಟ್ಟಂತಹ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ.
ಬೇಲೂರು, ಹಳೇಬೀಡು, ಪಟ್ಟದಕಲ್ಲು, ಬದಾಮಿಯಲ್ಲಿನ ಅನೇಕ ದೇವಸ್ಥಾನಗಳ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದ ಸೇವೆ ಅಸ್ಮರಣೀಯ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಬಡಿಗ, ಕಮ್ಮಾರ, ಶಿಲ್ಪಕಲೆ ಹಾಗೂ ಸ್ವರ್ಣಕಲೆ ಸೇರಿದಂತೆ ಪಂಚ ಕಸುಬುಗಳನ್ನು ನಿರ್ವಹಿಸುವವರೇ ವಿಶ್ವಕರ್ಮರು. ಹಗಲಿನಲ್ಲಿ ಸೂರ್ಯನಾಗಿ ರಾತ್ರಿಯಲ್ಲಿ ಚಂದ್ರನಾಗಿ ಪ್ರಕೃತಿಯ ಸ್ವರೂಪವಾಗಿ ಚೈತನ್ಯವನ್ನು ತುಂಬಿಕೊಂಡಿರುವವನೇ ವಿಶ್ವಕರ್ಮನೆಂದು ಅವರು ಶ್ಲಾಘಿಸಿದರು.
ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಮಾತನಾಡಿ, ದೇಶದ ಇತಿಹಾಸದ ಪುಟಗಳಲ್ಲಿ ದೊಡ್ಡ ದೊಡ್ಡ ಶಿಲ್ಪಗಳನ್ನು ಕೆತ್ತಿರುವವರು ವಿಶ್ವಕರ್ಮನ ಅನುಯಾಯಿಗಳು ಎಂಬುದು ಹೆಮ್ಮೆಯ ವಿಚಾರ. ವಿಶ್ವಕರ್ಮ ಎಂಬುದು ವಿರಾಟ್ ಪರ್ವ ಇದ್ದಂತೆ, ಎಲ್ಲಾ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುವವನು ವಿಶ್ವಕರ್ಮ ಎಂದು ಬಣ್ಣಿಸಿದರು.
ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ಎಸ್ ಎಸ್ ಅರಬ ಹಾಗೂ ಶಾಲಾ ಶಿಕ್ಷಕರು,ಮಕ್ಕಳು ಭಾಗವಹಿಸಿದ್ದರು.