ಇಂಡಿಯಲ್ಲಿ ಹಳ್ಳಿ ಸೊಗಡು..! ಹಿರಿಯ ಗೆಳೆಯರ ಆಟ..ಓಟ ಒಮ್ಮೆ ನೋಡ ಬನ್ನಿ
ಇಂಡಿ : ಸನಾತನ ಭಾರತದ ದೇಶದಲ್ಲಿ ತಲೆ ತಲಾಂತರದಿಂದ ಬಂದ ಭಾರತೀಯ ಹಬ್ಬ ಹರಿದಿನಗಳು ಅನೇಕ ರೀತಿಯಲ್ಲಿವೆ.
ಭಾರತೀಯ ಹಬ್ಬಗಳ ಹಿನ್ನಲೆಯನ್ನು ಗಮನಿಸಿದಾಗ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪೂಜಾ ಪದ್ಧತಿಗಳು ಅವುಗಳ ಸಂಸ್ಕೃತಿ-ಸಂಪ್ರದಾಯಗಳು ಬಲು ವೈಶಿಷ್ಟಗಳಿಂದ ಕೂಡಿಕೊಂಡಿವೆ ಎಂಬುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ.
ಭಾರತೀಯ ಪ್ರಾಚೀನ ಹಬ್ಬಗಳ ಪೈಕಿ ನಾಗರ ಪಂಚಮಿ ಹಬ್ಬ ಬಲು ವಿಶೇಷತೆಯಿಂದ ಕೂಡಿದೆ. ಇದು ಮನುಷ್ಯ ಪ್ರಕೃತಿಯೊಂದಿಗೆ ಬದುಕುತ್ತ ಸಕಲ ಪ್ರಾಣಿಗಳೊಂದಿಗೆ ನಾವು ದಯೆ ಮತ್ತು ಸ್ನೇಹ ಪೂರ್ಣ ಸಂಬಂಧ ಹೊಂದಬೇಕಾದ ಅವಶ್ಯಕತೆಯನ್ನು ತೋರಿಸುತ್ತದೆ.
ಹಲವು ರೀತಿಯ ಹಿನ್ನಲೆಯಲ್ಲಿ ಆಚರಿಸಿಕೊಂಡು ಬಂದಿರುವ ಈ ಹಳ್ಳಿ ಸೊಗಡಿನ ಹಬ್ಬದ ನಿಮಿತ್ಯ ಇಂಡಿ ಪಟ್ಟಣದ 1989 /1990 ನೇ ಸಾಲಿನ ಶ್ರೀಶಾಂತೇಶ್ವರ ಪ್ರೌಢ ಶಾಲಾ ಗೆಳೆಯರ ಬಳಗದ ವತಿಯಿಂದ ಇಂಡಿಯ ವ್ಯಾಪರಸ್ಥರಾದ ಶ್ರೀ ಪ್ರದೀಪ ಮುರಗುಂಡಿಯವರ ತೋಟದಲ್ಲಿ ಶ್ರೀ ಬಸವರಾಜ ಚೌದರಿಯವರ ನೇತ್ರತ್ವದಲ್ಲಿ ಹಳ್ಳಿ ಸೊಗಡಿನ ಸ್ಪರ್ಧೆಗಳಾದ ಜೋಕಾಲಿ ಜೀಕುವದು, ಚಿಣ್ಣಿದಾಂಡು, ಕಣ್ಣಾ ಮುಚ್ಚಾಲೆ ಗೋಟಿ,ಬುಗುರಿ ಕುಂಟಾಟ ಲಗೋರಿ,ಸುರಮನಿ ಗ್ರಾಮೀಣ ಆಟಗಳನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಗೆಳೆಯರಲ್ಲರು ಕೂಡಿಕೊಂಡಿ ಆಟವಾಡಿ ನಕ್ಕು ನಲಿದರು.
ನಾಗರ ಪಂಚಮಿಯ ವಿಶೇಷ ಖಾದ್ಯಗಳಾದ ಅಳ್ಳ, ಚೂಡಾ, ಚಕ್ಕುಲಿ, ಕರದಂಟು, ಕರ್ಚಿಕಾಯಿ, ಬೇಸನ ಉಂಡಿ, ರವೆ ಉಂಡಿ, ಶೇಂಗಾದ ಉಂಡಿ, ಶಂಕರ ಪೋಳೆ, ಕಡಲೆ ಉಸುಳಿ ಮೂಕಣಿ ಉಸುಳಿ ಬಾಯಲ್ಲಿ ನೀರೂರಿಸುವ ತರತರದ ಗರಿ ಗರಿಯಾದ ಖಾದ್ಯಗಳನ್ನು ಎಲ್ಲ ಗೆಳೆಯರು ಚಪ್ಪರಿಸಿ ತಿಂದು ತಮ್ಮ ಬಾಲ್ಯ ಜೀವನದ ಮಧುರ ನೆನಪುಗಳನ್ನು ಮೆಲಕು ಹಾಕಿದರು.
ಮಧ್ಯಾಹ್ನ ಸಜ್ಜಿ ರೊಟ್ಟಿ, ದಪಾಟಿ ಬಿಳಿ ಜೋಳದ ರೊಟ್ಟಿ, ಶೇಂಗಾ ಹೋಳಿಗೆ ತುಪ್ಪ ಅಗಸಿ ಚಟ್ನಿ, ಶೇಂಗಾ ಹಿಂಡಿ, ಎಣ್ಣಾಗಾಯಿ ಬದನೆಕಾಯಿ, ಕೆನೆ ಮೊಸರು,ಕಟ್ಟಿನ ಸಾರು, ನಿಂಬೆ ಉಪ್ಪಿನಕಾಯಿ, ಹತ್ತರಕಿ ಪಲ್ಯ, ಮೆಂತೆ ಸೊಪ್ಪು ಹುಳ ಬಾನ, ಅನ್ನ, ಹೀಗೆ ಎಲ್ಲ ರೀತಿಯ ತರೇಹವಾರಿ ತಿನಿಸುಗಳ ಸವಿದು ಗೆಳೆಯರು ಹಳ್ಳಿ ಸೊಗಡಿನ ಆಹಾರದ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಂಜುನಾಥ ಕೋಟೆಣ್ಣವರ.ಮನುಷ್ಯನ ಆರೋಗ್ಯಕ್ಕೆ ಶುಚಿ ರುಚಿಯಾದ ಆಹಾರ ಸುವಿಚಾರಗಳು ಪರಸ್ಪರ ಪ್ರೀತಿ ವಿಶ್ವಾಸದ ಬಾಂಧವ್ಯಗಳು ಕಾರಣ ನಾಗರ ಪಂಚಮಿ ಹಬ್ಬ
ಸಕಲ ಪ್ರಾಣಿ ಸಂಪತ್ತು ಸಸ್ಯ ಸಂಪತ್ತನ್ನು ಪ್ರೀತಿಸಬೇಕು ಎನ್ನುವ ಹೊಂದಿದೆ, ಮನುಷ್ಯರ ಜೀವನ ಒಂದು ತೂಗೂಯ್ಯಾಲೆ ಕಷ್ಟದ ನಂತರ ಸುಖ ಹೇಗೆ ಬಂದೇ ಬರುತ್ತದೆ.ಹಾಗೆ ಜೀವನದಲ್ಲಿ ಯಾವುದು ಶಾಶ್ವತವಲ್ಲ ಪ್ರೀತಿ-ವಿಶ್ವಾಸ ಕರುಣೆ ಮಾನವೀಯ ಮೌಲ್ಯಗಳನ್ನು ನಾವು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಶಾಂತು ಧನಶೆಟ್ಟಿ ಶಾಂತುಗೌಡ ಬಿರಾದಾರ, ಮುತ್ತುರಾಜ ಅಡಿಗ, ಚಂದನ ಧನಪಾಲ, ಉಮೇಶ ಶಿವಯೋಗಿ ಮಠ, ಉಮೇಶ ಕುಲಕರ್ಣಿ, ರಮೇಶ ಕುಲಕರ್ಣಿ,ನಾರಾಯಣ ಹಿಬಾರೆ,ಬಸವರಾಜ ದೇವರ, ಸುರೇಶ ಅವರಾದಿ, ದಶರಥ ಕೋರಿ, ರವಿ ವಂದಾಲ, ರಮೇಶ ಅಂಬಲಗಿ, ಪ್ರವೀಣ ಸುಲಾಖೆ, ರವಿ ನಾಯಕ, ಬಾನು ಪೂಜಾರಿ, ನಟರಾಜ ಗವಳಿ, ರಮೇಶ ಹಾವಿನಾಳ, ಹುಸೇನಿ ಮಕಾನದಾರ ಸುಮಾರು ಮುವತ್ತಕ್ಕೂ ಹೆಚ್ಚು ಗೆಳೆಯರ ಬಳಗದವರು ಹಾಜರಿದ್ದರು.