ಸರ್ಕಾರದ ವಿರುದ್ಧ ಗ್ರಾಮ ಆಡಳಿತ ಅಧಿಕಾರಿಗಳು ಆಕ್ರೋಶ..! ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ
ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತಾಧಿಕಾರಿಗಳ ಧರಣಿ
ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಕೆಲಸದ ಒತ್ತಡ ಕಡಿಮೆ ಮಾಡಲು ಒತ್ತಾಯ
ಇಂಡಿ : ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಕೆಲಸದ ಹೊರೆಯನ್ನು ಕಡಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ರಾಜ್ಯಾದ್ಯಂತ ಎರಡನೇ ಹಂತದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನಲೆಯಲ್ಲಿ ತಾಲೂಕು ಆಡಳಿತ ಸೌಧದ ಎದುರು ಎರಡನೇ ದಿನಕ್ಕೆ ಆವರಣದಲ್ಲಿ ಪ್ರತಿಭಟನೆ ಕಾಲಿಟ್ಟಿದೆ.
ಮಂಗಳವಾರ ಗ್ರಾಮ ಆಡಳಿತಾಧಿಕಾರಿಗಳ ಎರಡನೇ ದಿನದ ಮುಷ್ಕರಕ್ಕೆ ಬೆಂಬಲ ನೀಡಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ವಾಯ್ ಟಿ ಪಾಟೀಲ, ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ನಿರಂತರವಾಗಿ ಸರ್ಕಾರ ಕೆಲಸದ ಒತ್ತಡ ಹೇರುತ್ತಿರುವುದರಿಂದ ಒತ್ತಡ ಹೆಚ್ಚಾಗಿ ಅಧಿಕಾರಿಗಳು ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳ ಕಲ್ಪಿಸದೇ ಕೆಲಸದ ಒತ್ತಡ ಹೇರುತ್ತಿದ್ದರೆ ಕೆಲಸ ಮಾಡುವುದಾದರೂ ಹೇಗೆ..? ಅಗತ್ಯ ಸೌಲಭ್ಯಗಳಿಲ್ಲದೇ ನಿರಂತರವಾಗಿ ಕೆಲಸ ಮಾಡುವದಾದರು ಹೇಗೆ, ಅವರಿಗೆ ಮೂಲ ಸೌಲಭ್ಯ ಕುರ್ಚಿ, ಟೇಬಲ್, ಲ್ಯಾಪ್‌ಟಾಪ್ ಸೇರಿದಂತೆ ಅವರ ಬೇಡಿಕೆ ಪೂರೈಸಬೇಕು. ಜೊತೆಗೆ ರಜಾ ದಿನಗಳಲ್ಲೂ ಕೆಲಸದ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ ಕೌಟುಂಬಿಕ ಸಮಸ್ಯೆಗಳಿಗೆ ಎದುರುಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದನ್ನು ಕಡಿಮೆ ಮಾಡುವುದರ ಜೊತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ ಎ ರಾವೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಸ್ ವಿ ಹರಳಯ್ಯ, ನಿರ್ದೇಶಕ ಪಿ ಎಸ್ ಚಾಂದಕವಟೆ, ಸುರೇಶ ಚವ್ಹಾಣ, ಬಸವರಾಜ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.