ವಿಜಯಪುರ : ಸೈನಿಕ ಶಾಲೆ ಬಿಜಾಪುರ 62ನೇ ಸಂಸ್ಥಾಪನಾ ದಿನಾಚರಣೆ
ಸೈನಿಕ ಶಾಲೆ ಬಿಜಾಪುರ ತನ್ನ 62ನೇ ಸಂಸ್ಥಾಪನಾ ದಿನವನ್ನು ಮಂಗಳವಾರ, 16ನೇ ಸೆಪ್ಟೆಂಬರ್ 2025 ರಂದು ಅದ್ಭುತ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸುವ ಮೂಲಕ ಆಚರಿಸಿತು.
ನಿವೃತ್ತ ಕರ್ನಲ್ ಅಮಿತ್ ಸಿಂಗ್ ದಾಬಾಸ್, ವಾಯ್.ಎಸ್.ಎಮ್. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಸಭಾಂಗಣದಲ್ಲಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಕರ್ನಲ್ ಅಮಿತ್ ಸಿಂಗ್ ದಾಬಾಸ್ ರವರು ಶಾಲೆಯ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಯನ್ನು ಶ್ಲಾಂಘಿಸಿದರು. ಉತ್ತಮ ಶಿಕ್ಷಣವು ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಮತ್ತು ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳನ್ನು ಎದುರಿಸಲು ಕೌಶಲ್ಯಗಳು ಅವಶ್ಯಕ ಅವು ನಿಮ್ಮನ್ನು ಸದೃಢ ಗೊಳಿಸುತ್ತವೆಂದು ಅವರು ಹೇಳಿದರು. ಈ ಶಾಲೆಯ ಅದ್ಭುತ ಪಯಣವನ್ನು ಶ್ಲಾಂಘಿಸಿದ ಅವರು, ಈ ಅವಧಿಯಲ್ಲಿ ಶಾಲೆಯು ಹಲವಾರು ಸಾಧನೆಗಳನ್ನು ಸಾಧಿಸಿದೆ ಮತ್ತು ಅದರ ನಿರಂತರ ಪರಿಶ್ರಮದಿಂದ ಶಾಲೆಯ ಕೀರ್ತಿ ಅಜರಾಮರವಾಗಿರುವಂತೆ ಕಾರ್ಯ ಸಾಧನೆ ಮಾಡಿದೆ, ಕಾರಣ ಈ ಶಾಲೆಯು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ ಎಂದು ಹೇಳಿದರು ಮತ್ತು ಕೆಡೆಟ್‌ಗಳು ರಕ್ಷಣಾ ಪಡೆಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಕಠಿಣ ತರಬೇತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಾಕಷ್ಟು ಅವಕಾಶಗಳನ್ನು ಒದಗಿಸುವಲ್ಲಿ ಸೈನಿಕ್ ಶಾಲೆಗಳ ಮಹತ್ವ ಪಾತ್ರವನ್ನು ಕೊಂಡಾಡಿದರು. ಈ ಶಾಲೆಯ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ತಮ್ಮ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ಮಾರ್ಗದರ್ಶನ ಮಾಡಿದ್ದಕ್ಕಾಗಿ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಮಹತ್ವದ ಸಂದರ್ಭದಲ್ಲಿ ‘ಸಂಕಲ್ಪ’ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕೆಡೆಟ್ಗಳು ನೃತ್ಯ, ಹಾಡು, ನೃತ್ಯರೂಪಕ, ಕಿರುನಾಟಕ, ಮೈಮ್ ಮತ್ತು ಜಾನಪದ ನೃತ್ಯದಂತಹ ವಿವಿಧ ರೂಪಕಗಳನ್ನು ಪ್ರದರ್ಶಿಸಿದರು.
ಬಿಜಾಪುರ ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ರವರು ಶಾಲೆಯ ಇತ್ತೀಚಿನ ಬೆಳವಣಿಗೆಗಳು ಮತ್ತು ಶೈಕ್ಷಣಿಕ ಪ್ರಗತಿ, ಸಾಧನೆಗಳ ಬಗ್ಗೆ ಮಾಹಿತಿ ನೀಡುತ್ತಾ, ಮುಂದಿನ ದಿನಗಳಲ್ಲಿ ಶಾಲೆಯು ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಕಿರುನೋಟವನ್ನು ನೀಡುತ್ತಾ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಿತ ಚಾಂಪಿಯನ್ ಆಫ್ ಚಾಂಪಿಯನ್ಸ್ (COC ಹೌಸ್) ಟ್ರೋಫಿಯನ್ನು ಹಾಗೂ ಉತ್ಕೃಷ್ಟವಾದ ಶೈಕ್ಷಣಿಕ ಹಾಗೂ ಅತ್ಯುತ್ತಮ ಕ್ರೀಡಾ ಟ್ರೋಫಿಯನ್ನೂ ಕೂಡ ‘ಒಡೆಯರ ಸದನವು’ ಪಡೆದುಕೊಂಡಿತು. ಇದಕ್ಕೂ ಮುನ್ನ ಮುಖ್ಯ ಅತಿಥಿಗಳು ಗೌರವ ವಂದನೆಯನ್ನು ಸ್ವೀಕರಿಸಿದರು. ‘ಸ್ಮಾರಕ ತಾಣ’ದಲ್ಲಿ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ತದನಂತರ ಶಾಲೆಯ ಒಳ ಕ್ರೀಡಾಂಗಣದಲ್ಲಿ ಕೆಡೆಟ್ ಗಳ ವಿವಿಧ ಕವಾಯತು, ಸ್ಕೇಟಿಂಗ್, ಅರೋಬಿಕ್ಸ್, ಕರಾಟೆ, ಜಿಮ್ನಾಸ್ಟಿಕ್, ಕಂಟಿವ್ನ್ಯೂಟಿ ಡ್ರಿಲ್ ದಂತಹ ಅನೇಕ ರೋಮಾಂಚನಕಾರಿಯಾದ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಈ ಕಾರ್ಯಕ್ರಮದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ರವರು, ಉಪ-ಪ್ರಾಚಾರ್ಯೆ ಕಮಾಂಡರ್ ಮೀನಾ ಕುಮಾರಿ, ಆಡಳಿತಾಧಿಕಾರಿಯಾದ ಮೇಜರ್ ರಿತೇಶ್ ಕುಮಾರ್, ಹಿರಿಯ ಮಾಸ್ಟರ್ ಶ್ರೀ ರೇವಣಕುಮಾರ ದೇಸಾಯಿ, ಗಣ್ಯಮಹೋದಯರು, ಸೈನಿಕ ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗದವರು, ಶಾಲೆಯ ಎನ್.ಸಿ.ಸಿ. ಸಿಬ್ಬಂದಿವರ್ಗದವರು, ಕೆಡೆಟ್ ಗಳು, ಪಾಲಕರು ಉಪಸ್ಥಿತರಿದ್ದರು.