ವಿಜಯಪುರ | ಮೇ-17 & 18 ರಂದು ಹ್ಯಾಕ್ ವ್ಯೂಹ್-2025 ಕಾರ್ಯಕ್ರಮ
ವಿಜಯಪುರ: ಶ್ರೀ ಬಿ. ಎಂ. ಪಾಟೀಲ ಫೌಂಡೇಶನ್ ಹ್ಯಾಕ್ ವ್ಯೂಹ್-2025 ಕಾರ್ಯಕ್ರಮ ಮೇ 17 ಮತ್ತು 18 ರಂದು ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಮೇ 17 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮವನ್ನು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಶ್ರೀ ಬಿ. ಎಂ. ಪಾಟೀಲ ಫೌಂಡೇಶನ್ ಇನಕ್ಯೂಬೇಶನ್ ನಿರ್ದೇಶಕ ಹಾಗೂ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಸ್ಪ್ರಿಂಗ್ ಅಪ್ ಲ್ಯಾಬ್ಸ್ನ ಸಂಸ್ಥಾಪಕ ಮತ್ತು ಸಿಇಒ ಸಂತೋಷ್ ಕೊಟ್ನಿಸ್ ಮತ್ತು ಇನ್ನೋವಾಸ್ಕೇಪ್ ಸಂಸ್ಥಾಪಕ ಎಸ್. ಬದರಿ ನಾರಾಯಣ, ಬಿ. ಎಲ್ .ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಮತ್ತು ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಉಪಸ್ಥಿತರಿರಲಿದ್ದಾರೆ
ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳು ಮತ್ತು ಅದಕ್ಕೆ ಲಭ್ಯವಿರುವ ಪರಿಹಾರಗಳ ಕುರಿತು ಕಂಪ್ಯೂಟರ್ ಸಾಯಿನ್ಸ್ ಡೆಟಾ ಸಾಯಿನ್ಸ್, ಇನಫಾರ್ಮೆಶನ್ ಸಾಯಿನ್ಸ್, ಎಐಎಂಎಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆ ಇದಾಗಿದ್ದು, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳ ನಾನಾ 15 ನಗರಗಳಿಂದ 465 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಿದ್ದಾರೆ. ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸಾಫ್ಟವೇರ್ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳನ್ನು ಈಗಿನಿಂದಲೇ ಸಿದ್ಧಪಡಿಸಲು ಇದು ವರದಾನವಾಗಲಿದೆ.
ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರಮಾಣದಲ್ಲಿ ವಿಜಯಪುರ ನಗರದಲ್ಲಿ ಇದೇ ಮೊದಲ ಬಾರಿಗೆ ಹ್ಯಾಕ್ ವ್ಯೂಹ- 2025 ಸ್ಪರ್ಧೆ ನಡೆಯುತ್ತಿದ್ದು, ಮೂರು ಕಠಿಣ ಹಂತಗಳಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಒಟ್ಟು 48 ಗಂಟೆಗಳ ಅವಧಿಯನ್ನು ಹೊಂದಿದೆ. ಈಗಾಗಲೇ ಸ್ಪರ್ಧಾಳುಗಳು 18 ಗಂಟೆಗಳ ಅವಧಿಯನ್ನು ಆನಲೈನ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳು ಸಾಫ್ಟವೇರ್ ಕ್ಷೇತ್ರದಲ್ಲಿ ಸ್ಟಾರ್ಟ್-ಅಪ್ ಪ್ರಾರಂಭಿಸಲು ಇದು ನೆರವಾಗಲಿದೆ. ಅಷ್ಟೇ ಅಲ್ಲ, ಯುವಕರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಟಿ ವಲಯದಲ್ಲಿ ಹೆಚ್ಚೆಚ್ಚು ಸಾಧನೆ ಮಾಡಲು ಇದು ಉತ್ತಮ ವೇದಿಕೆ ಒದಗಿಸಲಿದೆ.
ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ ರೂ. 75 ಸಾವಿರ, 2ನೇ ಸ್ಥಾನ ಪಡೆದವರಿಗೆ ರೂ. 50 ಸಾವಿರ ಮತ್ತು 3ನೇ ಸ್ಥಾನ ಪಡೆದವರಿಗೆ ರೂ. 25 ಸಾವಿರ ನಗದು ಬಹುಮಾನ ಮತ್ತು ಇನಕ್ಯೂಬೇಶನ್ ಸೆಂಟರ್ ನಲ್ಲಿ ತರಬೇತಿ ಸೌಲಭ್ಯ ಪಡೆಯಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಆಶಿಶ್ ಕುಲಕರ್ಣಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.


















