ವಿಜಯಪುರ| ಮ್ಯಾರಾಥಾನ್ ಕ್ಷೇತ್ರಗಳಲ್ಲಿ ಅಮೋಘ ಸಾಧನೆ..! ಯಾರು ಯಾರು ಗೊತ್ತಾ..?
ವಿಜಯಪುರ, ಡಿ. 16: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ದಿನದಂದು ವೃಕ್ಷ, ಪರಂಪರೆ, ಮ್ಯಾರಾಥಾನ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಜನರಿಗೆ ಗೌರವ ಸನ್ಮಾನ ನಡೆಯಲಿದೆ.
ತಾಳಿಕೋಟೆ ತಾಲೂಕಿನ ತುಂಬಗಿಯ ಶಾಂತಮ್ಮ ಹರನಾಳ, ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಶಿವಾನಂದ ಕಟ್ಟಿಮನಿ, ಖ್ಯಾತ ಮಾರಾಥಾನ್ ಓಟಗಾರ ನರೇನ ನಾಗಶೆಟ್ಟಿ ಮತ್ತು ಪ್ರಾಚೀನ ಸ್ಮಾರಕ ಮತ್ತು ಪರಂಪರೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅಮೀನ ಹುಲ್ಲೂರ ಅವರಿಗೆ ಈ ಸನ್ಮಾನ ನಡೆಯಲಿದೆ.
ಈ ನಾಲ್ಕೂ ಜನರು ಅವರದೇ ಆದ ಕ್ಷೇತ್ರದಲ್ಲಿ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದು, ಅವರ ಸಾಧನೆಯ ಕುರಿತ ಮಾಹಿತಿ ಇಲ್ಲಿದೆ.
ಶಾಂತಮ್ಮ ಹರನಾಳ
ವಿಜಯಪುರ ತಾಲೂಕಿನ ತಿಡಗುಂದಿಯಲ್ಲಿ ವಾಸಿಸುತ್ತಿರುವ ಶಾಂತಮ್ಮ ಹರನಾಳ ಪಾರಂಪರಿಕ ಅಂದರೆ ಹಳೆಯ ಪದ್ಧತಿಯಡಿ ಗಿಡ ನೆಡುವುದನ್ನು ರೂಢಿಸಿಕೊಂಡಿದ್ದಾರೆ. ತಮ್ಮ ಮೂಲ ಊರಾದ ತಾಳಿಕೋಟೆ ತಾಲೂಕಿನ ತುಂಬಗಿ ಬಳಿ ಇರುವ ಹಳ್ಳದ ಪಕ್ಕದಲ್ಲಿ ಅವರು ಅಂದು ಬಿತ್ತಿರುವ ಬೀಜಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಅಷ್ಟೇ ಅಲ್ಲ, ಆರೂವರೆ ಕೂರಗಿ ಅಂದರೆ ಸುಮಾರು 24 ಎಕರೆ ಪ್ರದೇಶದಲ್ಲಿ ಅವರು ಭಾರತೀಯ ಹಳೆಯ ಪದ್ದತಿಯಂತೆ ಬೀಜ ಬಿತ್ತನೆ ಮಾಡಿದ್ದಾರೆ. ಅಂದು ಒಂದು ಹುಣಸೆ ಗಿಡ ಮಾತ್ರ ಇತ್ತು. ಇಂದು ಅಲ್ಲಿ 100ಕ್ಕೂ ಹೆಚ್ಚು ಹುಣಸೆ ಮರಗಳಿವೆ.
ತಿಡಗುಂದಿ ಬಳಿ ಇವರು ಪುತ್ರ ಪ್ರಾರಂಭಿಸಿರುವ ಕಾಲೇಜಿನಲ್ಲಿ ಸುತ್ತಮುತ್ತಲೂ ಅವರು ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೀತಿ ತೋರಿಸಿದ್ದಾರೆ. ಇಲ್ಲಿರುವ 30 ಕರೆಯಲ್ಲಿ ಕಾಲೇಜಿನ ಜೊತೆಗೆ ಹಾಸ್ಟೇಲ್ ಕೂಡ ಇದ್ದು, ಅಲ್ಲಿ ಈ ಇಳಿ ವಯಸ್ಸಿನಲ್ಲಿಯೂ ಪ್ರತಿದಿನ ನಸುಕಿನ ಜಾವ 3 ಗಂಟೆಗೆ ಏಳುವ ಅವರು ಪ್ರತಿನಿತ್ಯ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಕ್ಕಳಲ್ಲಿ ಹಳೆಯ ಗಿಡ ನೆಡುವ ಪದ್ಧತಿಯನ್ನು ಪರಿಚಯಿಸುತ್ತಿದ್ದಾರೆ. ಹೈನುಗಾರಿಕೆ ಮಾಡುತ್ತ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತ ಈಗಲೂ ಪರಿಸರಕ್ಕೆ ಪೂರಕವಾದ ಕೆಲ ಮಾಡುತ್ತಿದ್ದಾರೆ.
ಶಿವಾನಂದ ಕಟ್ಟಿಮನಿ
ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿರುವ ಶಿವಾನಂದ ಕಟ್ಟಿಮನಿ ಪರಿಸರ ಪ್ರೇಮ ಇತರರಿಗೆ ಮಾದರಿಯಾಗಿದೆ. ಯಾರಾದರೂ ವೃತ್ತಿಯಲ್ಲಿ ಬಡ್ತಿ ಹೊಂದಿದರೆ ಔತಣ ಕೂಟ ನಡೆಸಿ ಸಂತಸ ಪಟ್ಟರೆ ಇವರು ಮಾತ್ರ ತಮ್ಮ ಸೇವಾ ಬಡ್ತಿಯ ಸವಿ ನೆನಪಿನಲ್ಲಿ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಿಮ್ಯಾಂಡ್ ಹೋಂ ಆವರಣದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಇವರು 2023ರಲ್ಲಿ ನೆಟ್ಟಿರುವ ಗಿಡಗಳು ಈಗ 15 ಅಡಿಗಳಷ್ಟು ಎತ್ತರ ಬೆಳೆದಿದ್ದು, ವೃಕ್ಷ ಅಭಿಯಾನದ ಪ್ರೇರಣೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದಾಗಿ ಪರಿಸರ ಬೆಳೆಸುವ ಕೆಲಸ ಮಾಡಿದ್ದಾರೆ. ಈಗಲೂ ಅಗತ್ಯಬಿದ್ದಾಗ ಟ್ಯಾಂಕರ್ ಮೂಲಕ ನೀರು ಪೂರೈಸಿ ಅಲ್ಲಿರುವ ಗಿಡಗಳನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಅಲ್ಲಿರುವ ನೇರಳೆ, ಮಾವು, ಬೇವು, ಬಾರೆಹಣ್ಣು, ಅರಣ್ಯ ಅಲಂಕಾರಿಕ ಗಿಡಗಳು ರಿಮ್ಯಾಂಡ್ ಹೋಂ ನಲ್ಲಿರುವ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರೇರಣೆ ನೀಡುತ್ತಿವೆ.
ನರೇಂದ್ರ ಕುಮಾರ ನಾಗಶೆಟ್ಟಿ
ನರೇಂದ್ರ ಕುಮಾರ ನಾಗಶೆಟ್ಟಿ, ಮ್ಯಾರಾಥಾನ್ ಓಟಗಾರ
ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿರುವ ಸಿ.ಆರ್.ಡಿ.ಎಸ್ ಸಂಸ್ಥೆಯ ಸಹಸಂಸ್ಥಾಪಕ, ಹುಬ್ಬಳ್ಳಿ ಮೂಲದ ಮತ್ತು ಸದ್ಯ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ನರೇಂದ್ರ ಕುಮಾರ ನಾಗಶೆಟ್ಟಿ(49) ಮ್ಯಾರಾಥಾನ್ ಮ್ಯಾನ್ ಎಂದೇ ಹೆಸರು ಮಾಡಿದ್ದಾರೆ. ವೃತ್ತಿಪರ ಮ್ಯಾರಾಥಾನ್ ವೃತ್ತಿಪರ ಓಟಗಾರಾಗಿರುವ ಇವರು ಕಳೆದ ಎಂಟು ವರ್ಷಗಳಿಂದ ಓಡುತ್ತಿದ್ದಾರೆ. ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಸದಸ್ಯ ಮತ್ತು ಪರಿಸರ ಮತ್ತು ಮ್ಯಾರಾಥಾನ್ ಗಳ ಬಗ್ಗೆ ಪ್ರಚಾರವನ್ನು ಮಾಡುತ್ತ ಸಾಕಷ್ಟು ಜನ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡು ಸದೃಢ ಆರೋಗ್ಯ ಹೊಂದಲು ಪ್ರೇರಣೆಯಾಗಿದ್ದಾರೆ.
100ಕ್ಕೂ ಹೆಚ್ಚು ಹಾಫ್ ಮತ್ತು ಫುಲ್ ಮ್ಯಾರಾಥಾನ್ ಓಡಿರುವ ಅವರು, ಓರ್ವ ವ್ಯಕ್ತಿ ಹೇಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಹೆಸರಾಂತ ಎಸ್.ಆರ್.ಟಿ ಮತ್ತು ಮಲೆನಾಡ ಸೇರಿದಂತೆ ಸಾಕಷ್ಟು ಅಲ್ಟ್ರಾ ಮ್ಯಾರಾಥಾನ್ ಗಳಲ್ಲೂ ಪಾಲ್ಗೋಂಡು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮಲೆನಾಡು ಮ್ಯಾರಾಥಾನ್ ನಲ್ಲಿ 50 ಕಿ. ಮೀ. ಮತ್ತು 100 ಕಿ. ಮೀ. ಅಲ್ಟಾ ಮ್ಯಾರಾಥಾನ್ ಓಡಿದ್ದಾರೆ. ಇತ್ತೀಚೆಗೆ ನಡೆದ ಮಲೆನಾಡು ಮ್ಯಾರಾಥಾನ್ ನಲ್ಲಿ 100 ಕಿ. ಮೀ. ದೂರವನ್ನು 21 ಗಂಟೆಗಳಲ್ಲಿ ಕ್ರಮಿಸುವ ಮೂಲಕ ತಮ್ಮ ವೃತ್ತಿಪರ ಓಡುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಅಮೀನುದ್ದೀನ್ ಹುಲ್ಲೂರ್
ವಿಜಯಪುರ ನಗರದ ಅಮೀನುದ್ದಿನ್ ಹುಲ್ಲೂರ್ ಪರಂಪರೆ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹವ್ಯಾಸದಿಂದ ಹೆರಿಟೇಜ್ ಕಾರ್ಯಕರ್ತ ಮತ್ತು ವೃತ್ತಿಯಿಂದ ಇಂಟಿರಿಯರ್ ಡಿಸೈನರ್ ಆಗಿದ್ದಾರೆ. ಐತಿಹಾಸಿಕ ಗೋಳಗುಮ್ಮಟದಲ್ಲಿ ಗೈಡ್ ಆಗಿದ್ದ ಇವರ ಅಜ್ಜ ಬಾಷಾಸಾಬ ಹುಲ್ಲೂರ ಅವರಿಂದ ಬಾಲ್ಯದಿಂದಲೇ ಸ್ಪೂರ್ತಿ ಪಡೆದ ಇವರು ಹಳೆಯ ನಾಣ್ಯಗಳ ಸಂಗ್ರಹಿಸಿದ್ದಾರೆ. ಅಲ್ಲದೇ, ಅವುಗಳನ್ನು ಗೋಳಗುಮ್ಮಟದಲ್ಲಿರುವ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ. ಅಲ್ಲದೇ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ವಿಜಯಪುರ ನಗರದಲ್ಲಿರುವ ಜಲಸುರಂಗ ಅಂದರೆ ಕರೇಜ್ ಗಳ ಸಂಶೋಧನೆಯನ್ನೂ ಕೈಗೊಂಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು 60 ಅಡಿ ಆಳದಲ್ಲಿರುವ ಈ ಸುರಂಗಗಳಿಗೆ ಕರೆದೊಯ್ದು ತೋರಿಸಿದ್ದಾರೆ. ಜೊತೆಗೆ ತಾವು ಉತ್ಖನನ ಮಾಡುವಾಗ ಸಿಕ್ಕ ಹಳೆಯ ಕಾಲದ ಚಿನ ಲೇಪಿತ ಸೇರಿದಂತೆ ಪ್ರಾಚೀನ ವಸ್ತುಗಳನ್ನು ಸರಕಾರಕ್ಕೆ ನೀಡಿದ್ದಾರೆ. ಗುಮ್ಮಟ ನಗರಿಯ ಪ್ರಾಚೀನ ಸ್ಮಾರಕಗಳನ್ನು ಹಚ್ಚೆಚ್ಚು ಜನರಿಗೆ ತಲುಪಿಸಲು ಅಂತಾರಾಷ್ಟ್ರೀಯ ಸಮ್ಮೇಳನವನ್ನೂ ಆಯೋಜಿಸಿದ್ದಾರೆ.