ರಸ್ತೆ ಅಪಘಾತದಲ್ಲಿ ಪಶುವೈದ್ಯಕೀಯ ಪರೀಕ್ಷಕ ಸಾವು
ಅಫಜಲಪುರ: ಅಫಜಲಪುರ ತಾಲೂಕಿನ ಚಿಂಚೋಳಿ ಸಮೀಪ ನಡೆದ ಬೈಕ್ ರಸ್ತೆ ಅಪಘಾತದಲ್ಲಿ ಪಶುವೈದ್ಯಕೀಯ ಪರೀಕ್ಷಕರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸಲಗಾರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಪಶುವೈದ್ಯಕೀಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ವೈಜನಾಥ ಕಲಶೆಟ್ಟಿ (37) ಮೃತರಾದವರು ಎಂದು ತಿಳಿದು ಬಂದಿದೆ.
ಮೂಲತಃ ಅಫಜಲಪುರ ತಾಲೂಕಿನ ಆನೂರ ಗ್ರಾಮದ ನಿವಾಸಿಯಾಗಿದ್ದ ಅವರು ಕರ್ತವ್ಯ ಸಂಬಂಧ ಪ್ರಯಾಣಿಸುತ್ತಿದ್ದ ವೇಳೆ ಚಿಂಚೋಳಿ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಎರಡು ಗಂಡು ಮಕ್ಕಳು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಂಧು-ಬಳಗ ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಸೇವಾ ಮನೋಭಾವದಿಂದ ಪಶುಸಂಗೋಪನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವೈಜನಾಥ ಕಲಶೆಟ್ಟಿಯವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರಕರಣ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


















