ಬೆಂಗಳೂರು ಅಕ್ಟೋಬರ್ 23 : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಮನವಿ ಸಲ್ಲಿಸಲು ಬಂದಂತಹ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಸಚಿವ ವಿ. ಸೋಮಣ್ಣ ಗೋವಿನ ಮುಖದ ವ್ಯಾಘ್ರ. ಸರಕಾರಕ್ಕೆ ಸಣ್ಣ ಮಟ್ಟದ ಮರ್ಯಾದೆ ಇದ್ದರೆ ತಕ್ಷಣ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರು ಹಾಗೂ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಢ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ವಿ ಸೋಮಣ್ಣ ಸಂಭಾವಿತರ ಸೋಗಿನಲ್ಲಿರುವ ಗೋಮುಖ ವ್ಯಾಘ್ರ. ಕೇವಲ ತಮ್ಮ ಹಾಗೂ ಕುಟುಂಬದ ಅಭಿವೃದ್ದಿಗಾಗಿ ಶ್ರಮ ಹಾಕುವ ಅವರು ಬಡವರ ಪರ ಎಂದು ನೀಡುವ ಎಲ್ಲಾ ಹೇಳೀಕೆಗಳು ಸುಳ್ಳು. ಬಡವರ ಅಭಿವೃದ್ದಿಗಾಗಿ ಶ್ರಮಿಸುವ ಯಾವೊಬ್ಬ ಜನಪ್ರತಿನಿಧಿಯೂ ನಾಗರೀಕರ ಮೇಲೆ ಹಲ್ಲೆ ಮಾಢುವುದಿಲ್ಲ. ಉನ್ನತ ಸ್ಥಾನದಲ್ಲಿರುವರು ತಾಳ್ಮೆ ಕಳೆದುಕೊಂಡು ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ. ಇದು ಸಂಭಾವಿತ ಸೋಗಿನ ಹಿಂದೆ ಇರುವಂತಹ ವ್ಯಾಘ್ರತನದ ಪ್ರದರ್ಶನವಾಗಿದ್ದು, ಸಣ್ಣ ಮಟ್ಟದ ಬದ್ದತೆಯನ್ನು ಹೊಂದಿದ್ದರೂ ಮುಖ್ಯಮಂತ್ರಿಗಳು ಈ ಕೂಡಲೇ ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು.