ನಗರ ಸಾರಿಗೆ ಸ್ತಬ್ದ – ಆಟೋ ಸಂಚಾರ ವಿರಳ
ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಿನಾಮೆಗೆ ಒತ್ತಾಯಿಸಿ ಅಹಿಂದ ಒಕ್ಕೂಟ ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಕಳೆದೆರಡು ದಿನಗಳಿಂದಲೂ ಒಕ್ಕೂಟದ ಪದಾಧಿಕಾರಿಗಳು ಸರಣಿ ಸಭೆ ನಡೆಸಿ ಬಂದ್ ಬೆಂಬಲ ಕೋರಿದ್ದರು. ಸೋಮವಾರ ಈ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಂದ್ ಯಶಸ್ವಿಯಾಯಿತು.
ಸದಾ ಜನಜಂಗುಳಿಯಿಂದ ಗೀಜಗಿಡುತ್ತಿದ್ದ ಗಾಂಧಿವೃತ್ತ, ಕೇಂದ್ರ ಬಸ್ ನಿಲ್ದಾಣ, ಕೆ.ಸಿ. ಮಾರುಕಟ್ಟೆಯಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುವಂತಾಯಿತು. ಆದರೆ ಪ್ರತಿಭಟನಾ ಸ್ಥಳದಲ್ಲಿ ಮಾತ್ರ ಎತ್ತ ನೋಡಿದರೂ ಜನಜಂಗುಳಿ ಕಂಡು ಬಂದಿತು.
ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ಸೇವಾ-ಸಂಸ್ಥೆಗಳು ಬಹುತೇಕ ಬಂದ್ ಆಗಿದ್ದವು. ನಗರ ಸಾರಿಗೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆಟೋ ಸಂಚಾರ ಬೆರಳಣಿಕೆಯಷ್ಟಿತ್ತು. ಔಷಧ ಅಂಗಡಿ, ವೈದ್ಯಕೀಯ ಸೇವೆಗಳು ಎಂದಿನಂತೆ ಇದ್ದವು. ಪ್ರತಿಭಟನೆ ಸಾಗುವ ಮಾರ್ಗ ಮಧ್ಯದಲ್ಲಿರುವ ಪೆಟ್ರೋಲ್ ಪಂಪ್ಗಳು ಕೆಲ ಕಾಲ ಬಂದ್ ಆಗಿದ್ದವು. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮೊದಲೇ ಮಾಡಲಾಗಿತ್ತು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ರಜೆ ಘೋಷಣೆ ಮಾಡಿದ್ದವು.
ವಿಜಯಪುರದ ಎಲ್ಬಿಎಸ್ ಮಾರುಕಟ್ಟೆ, ಸರಾಫ್ ಬಜಾರ್, ಜವಳಿ ಮಾರುಕಟ್ಟೆ, ಕೆ.ಸಿ. ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲ ಭಾಗಗಳಲ್ಲಿಯೂ ಅಂಗಡಿ-ಮುಗ್ಗಟ್ಟು ಬಂದ್ ಆಗಿದ್ದವು. ಅಷ್ಟೇ ಅಲ್ಲದೇ ಜಲನಗರ, ಜಾಮಿಯ ಮಸೀದಿ, ಬಡಿಕಮಾನ್, ಆದರ್ಶನಗರ, ಬಂಜಾರಾ ಕ್ರಾಸ್ ಬಳಿಯ ಅನೇಕ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು.
ಸ್ಟೇಷನ್ ರಸ್ತೆ, ಮನಗೂಳಿ ಅಗಸಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಟೈರ್ ಸುಟ್ಟು ಕೆಲಕಾಲ ರಸ್ತೆ ತಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಪ್ರತಿಭಟನಾಕಾರರು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟಿಸಿ ಅಸಮಾಧಾನ ವ್ಯಕ್ತಪಡಿಸಿದರು.


















