ಅನಧಿಕೃತ ಗುಂಟಾ ಲೇಔಟ್ ತೆರವು ಕಾರ್ಯಾಚರಣೆ
ವಿಜಯಪುರ ಜು.01: ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಗಳ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಿರ್ಮಾಣ ಮಾಡಿದ ತುಂಡು ಜಮೀನ (ಗುಂಟೆವಾರು) ಅಭಿವೃದ್ದಿ ಪಡಿಸುತ್ತಿರುವುದನ್ನು ಕಾರ್ಯಾಚರಣೆ ನಡೆಸಿ ಇಂದು ತೆರವುಗೊಳಿಸಲಾಯಿತು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಅವರು ತಿಳಿಸಿದ್ದಾರೆ.
ವಿಜಯಪುರ ತಾಲೂಕಿನ ಮಹಾಲ್‍ಬಾಗಾಯತ ಗ್ರಾಮದ ಸರ್ವೆ ನಂ.837/*/7ರ ಕ್ಷೆತ್ರ 2ಎಕರೆ 3 ಗುಂಟೆ ಪ್ರದೇಶದ ಜಮೀನುದಾರರು ಕಂದಾಯ ಇಲಾಖೆ, ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ಅನಧಿಕೃತವಾಗಿ ತುಂಡು ಜಮೀನು ಮಾಡುತ್ತಿರುವುದರಿಂದ ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸಲು ತಿಳಿಸಲಾಗಿತ್ತಾದರೂ, ತೆರವುಗೊಳಿಸದೇ ಇರುವುದರಿಂದ ಪೊಲೀಸ್ ಇಲಾಖೆ, ಕಂದಾಯ ಇಲಾಖೆ,ಮಹಾನಗರ ಪಾಲಿಕೆ ಇವರ ಸಹಯೋಗದೊಂದಿಗೆ ಜುಲೈ2 ರಂದು ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಆದರ್ಶನ ನಗರ ಪೊಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸೀತಾರಾಮ ಲಮಾಣಿ ಹಾಗೂ ಮಹಾನಗರ ಪಾಲಿಕೆ, ತಹಶೀಲ್ದಾರ ಕಚೇರಿ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.