ಮನಗೂಳಿ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ: ಸಿಇಒ ರಿಷಿ ಆನಂದ
ವಿಜಯಪುರ ಆಗಸ್ಟ್ ೪ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯತಿ ಹಾಗೂ ಮನಗೂಳಿ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ನಿಡಗುಂದಿ ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯ ಬ್ಯಾಲ್ಯಾಳ ಗ್ರಾಮದ ಗ್ರಾಮಸ್ಥರನ್ನು ಸೋಮವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆ ಹಾಗೂ ಮನೆಯ ಸುತ್ತ-ಮುತ್ತಲೂ ಮತ್ತು ಗ್ರಾಮದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ. ಶುದ್ಧೀಕರಿಸಿದ ನೀರನ್ನೇ ಸೇವಿಸಬೇಕು ಎಂದು ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮದಲ್ಲಿ ಮನೆಗಳಿಗೆ ನೀರು ಸರಬರಾಜು ಮಾಡುವ ಮುನ್ನ ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಬೇಕು ಮತ್ತು ನೀರಿನ ಗುಣಮಟ್ಟ ಪರೀಕ್ಷಿಸಬೇಕು. ತದನಂತರ ನೀರು ಸರಬರಾಜು ಮಾಡಬೇಕು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿಲ್ಯಕ್ಷö್ಯವಹಿಸಬಾರದು. ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯತನ ಕಂಡು ಬಂದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು. ಗ್ರಾಮದ ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ, ಸದರಿ ನೀರಿನ ಘಟಕ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಅಂಗನವಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ಮಕ್ಕಳ ಕಲಿಕಾ ಸಾಮರ್ಥ್ಯ ಗುಣಮಟ್ಟ ಹೆಚ್ಚಳವಾಗುವಂತೆ ಕಲಿಕೆಗೆ ಆದ್ಯತೆ ನೀಡಬೇಕು. ಅಲ್ಲಿನ ಅಡುಗೆ ಕೊಠಡಿ ಸ್ವಚ್ಚತೆಗೆ ಶುಚಿತ್ವ ಕಾಪಾಡಬೇಕು. ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿ ಮಾಹಿತಿ ದಾಖಲೆ ಪರಿಶೀಲನೆ ನಡೆಸಿದರು. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಮಕ್ಕಳಿಗೆ ಸಮಯಾನುಸಾರ ಪೌಷ್ಠಿಕ ಆಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಸೂಚನೆ ನೀಡಿದರು.
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಪ್ರತಿದಿನ ಶುದ್ಧ ಕುಡಿಯುವ ನೀರು ಒದಗಿಸಬೇಕು. ಶಾಲಾ ಆವರಣದಲ್ಲಿ ಪ್ರತಿನಿತ್ಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಕಲಿಕೆಗೆ ಸಹಜವಾಗುವಂತೆ ಪಾಠ ಬೋಧನೆ ಮಾಡಬೇಕು. ಈ ಶಾಲೆಯಲ್ಲಿ ೮ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದು, ೯ನೇ ತರಗತಿಯವರೆಗೆ ಮುಂದುವರೆಸುವ ಅಭಿಪ್ರಾಯ ಉಕ್ಕಲಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರ ಬೇಡಿಕೆ ಇರುವ ನಿಮಿತ್ಯ ಜಿ.ಪಂ. ಸಿಇಓ ರವರು ೯ನೇ ತರಗತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಶಾಲಾ ಕೊಠಡಿಯನ್ನು ಪರಿಶೀಲನೆ ನಡೆಸಿ ಬಸವನ ಬಾಗೇವಾಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲೆಯ ಮುಖ್ಯ ಗುರುಗಳಿಗೆ ೯ನೇ ತರಗತಿಯನ್ನು ಪ್ರಾರಂಭಿಸಲು ಸೂಕ್ತ ಅವಕಾಶವನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ತದನಂತರ ಶಾಲಾ ಆವರಣದ ಕೊಠಡಿಗಳನ್ನು ಹಾಗೂ ಸ್ಮಾರ್ಟ್ ಕ್ಲಾಸಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ, ಕಲಿಕಾ ಮಟ್ಟವನ್ನು ಪರೀಶೀಲಿಸಿದರು.
ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಪರಿಶೀಲಿಸಿದ ಅವರು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಪ್ರತಿದಿನ ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು ಮತ್ತು ಕಡ್ಡಾಯವಾಗಿ ಹಾಜರಾತಿ ನಿರ್ವಹಣೆ ಮಾಡಬೇಕು. ಅದೇ ರೀತಿ ವಿದ್ಯಾರ್ಥಿಗಳ ಹಾಜರಾತಿಯೂ ಸಹ ಕಡಿಮೆ ಆಗದಂತೆ ಕ್ರಮವಹಿಸಬೇಕು. ಮಕ್ಕಳು ಗೈರು ಹಾಜರಾಗದಂತೆ ನೋಡಿಕೊಳ್ಳಲು ಮಕ್ಕಳ ಪೋಷಕರಿಗೆ ಮನವೊಲಿಸಬೇಕು. ಶಾಲೆಯಲ್ಲಿ ಸ್ವಚ್ಛತೆ ಕುರಿತು ಗಮನವಹಿಸಬೇಕು. ಪ್ರತಿನಿತ್ಯ ಶಾಲೆಯ ಎಲ್ಲಾ ಕೊಠಡಿಗಳು, ಒಳಾಂಗಣ ಹಾಗೂ ಹೊರಾಂಗಣ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಿಸಿಯೂಟದ ಅಡುಗೆ ಕೋಣೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಪ್ರಗತಿ ಹಂತದ ಹೈಟೆಕ್ ಶೌಚಾಲಯ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಮುಕ್ತಾಯಗೊಳಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ನಂತರ, ಮನಗೂಳಿ ಪಟ್ಟಣದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳಾದ ಊಟ, ವಸತಿ, ಕುಡಿಯುವ ನೀರು, ಶೌಚಾಲಯ, ಕೊಠಡಿ, ಗ್ರಂಥಾಲಯಗಳನ್ನು ಪರಿಶೀಲಿಸಿದರು. ಪ್ರತಿ ದಿನ ಎಲ್ಲ ಅಡುಗೆ ಕೊಠಡಿ ಭೋಜನಾಲಯಗಳು, ದಾಸ್ತಾನು ಕೊಠಡಿಗಳು, ನಿಲಯದ ಶೌಚಾಲಯಗಳು, ಸ್ನಾನದ ಗೃಹಗಳು, ಕುಡಿಯುವ ನೀರಿನ ಘಟಕಗಳು ಈ ಎಲ್ಲ ವ್ಯವಸ್ಥೆಗಳನ್ನು ಸ್ವಚ್ಛತೆಯಿಂದ ಇಡಬೇಕು ಮತ್ತು ಉತ್ತಮವಾಗಿ ನಿರ್ವಹಣೆ ಮಾಡಬೇಕು, ವಸತಿ ನಿಲಯದ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳು, ಮಾಸ ಪತ್ರಿಕೆಗಳು, ಉದ್ಯೋಗ ಮಿತ್ರ ಹೀಗೆ ಮುಂತಾದ ಪುಸ್ತಕಗಳನ್ನು ಪೂರೈಸಬೇಕು, ನಿಲಯದ ವಿದ್ಯಾರ್ಥಿಳಿಗೆ ಪ್ರತಿ ಮಾಹೆಯಾನ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿಸಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಇದೇ ರೀತಿ ವಿದ್ಯಾರ್ಥಿಗಳಿಗೆ ಉಪಹಾರ, ಊಟ, ಶುದ್ಧ ಕುಡಿಯುವ ನೀರು ಮತ್ತು ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಪುಂಡಲೀಕ ಮಾನವರ, ಬಸವನ ಬಾಗೇವಾಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಕಾಶ ದೇಸಾಯಿ, ನಿಡಗುಂದಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ವಿ. ಬಿ. ಗೊಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳಾದ ಎಸ್. ವ್ಹಿ. ನಿಂಬಾಳ, ಉಕ್ಕಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಹಿಟ್ನಳ್ಳಿ, ಇಟಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೆಚ್. ಆರ್. ವಡ್ಡರ, ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಮಾಗಿ, ಕಾರ್ಯದರ್ಶಿ ಜಿ.ಎಮ್. ಬೇನಾಳ ಮಠ, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಮುಖ್ಯ ಗುರುಗಳು, ಶಿಕ್ಷಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.