ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ಥರ್ಮಲ್ ಪವರ್ ಸ್ಟೇಷನ್ ಕಂಪನಿಯ (ವೈಟಿಪಿಎಸ್) ಕಟ್ಟಡ ಕುಸಿದು ಬಿದ್ದು ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಗಾಯಳುಗಳ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಉಳಿದ ಇಬ್ಬರು ಕಾರ್ಮಿಕರಿಗೂ ತೀವ್ರತರವಾದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಅರ್ ಟಿ ಪಿ ಎಸ್ ಕಂಪನಿಯ ಘಟಕವೊಂದರ ಕಟ್ಟಡದಲ್ಲಿ ಕಲ್ಲಿದ್ದಲು ಜಮಾ ಮಾಡಲಾಗುತ್ತದೆ. ಅದರ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಗಾಯಗೊಂಡಿದ್ದು, ರಾಯಚೂರಿನ ಸುರಕ್ಷತಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳು ಹೊರರಾಜ್ಯದವರು ಎಂದು ತಿಳಿದು ಬಂದಿದೆ. ಈ ಕುರಿತು ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡ ರಂಗಾರೆಡ್ಡಿ ಮಾತನಾಡಿ ಕಾರ್ಖಾನೆಯಲ್ಲಿ “ಕಳೆದ ಮೂರು ವರ್ಷಗಳಿಂದ ಶಿಥಿಲಗೊಂಡಿದ್ದ ಕಟ್ಟಡವನ್ನು ದುರಸ್ತಿ ಮಾಡಲು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಕಟ್ಟಡ ಕುಸಿದು ಒಂದು ಕಡೆ ಬಿದ್ದು ಹಾಳಾಗಿತ್ತು.
“ಕಟ್ಟಡ ದುರಸ್ತಿಗೆ ಬರುವ 50 ಕಾರ್ಮಿಕರು 25-30 ವರ್ಷದ ಆಸುಪಾಸಿನಲ್ಲಿದ್ದು, ಕಡಿಮೆ ಸಂಬಳ ನೀಡಿ, ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ.
ಅಲ್ಲದೆ ಅವರ ಜೀವ ರಕ್ಷಣೆಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಪರಿಣಾಮವಾಗಿ ಒಬ್ಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು,ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಈ ಘಟನೆಗೆ ನೇರ ಹೊಣೆ.
ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.