ಇಂಡಿ :ಶಿಕ್ಷಣ ಎನ್ನುವದು ವಿದ್ಯಾರ್ಥಿಗಳಿಗೆ ಬಾಳಿನಲ್ಲಿ ಬೆಳಕು ತರುವಂತ ಸಾಧನವಾಗಿದೆ.ಆದರೆ ಅದು ಅವರ ಆಸಕ್ತಿಗನುಗುಣವಾಗಿ ಸಾಗಬೇಕೇ ವಿನಃ ಅವರ ಆಸಕ್ತಿಗೆ ವಿರುದ್ಧವಾಗಿ ಸಾಗಿದರೆ ಮಕ್ಕಳ ಬಾಳನ್ನು ಕತ್ತಲಾಗಿಸುವ ಸಾಧನಗಬಹುದೆಂದು ಸಾಹಿತಿ ಶಿಕ್ಷಕ ದಶರಥ ಕೋರಿಯವರು ತಿಳಿಸಿದರು.
ಇಂಡಿ ಪಟ್ಟಣದ ಪ್ರತಿಷ್ಠಿತ ಎಕ್ಸ್ ಲೆಂಟ್ ಆಂಗ್ಲ ಮಾಧ್ಯಮ ಹಾಗೂ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ದೇಶದ ಹೆಸರಾಂತ ಕವಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾ ಟ್ಯಾಗೋರವರ ಮನೆಯಲ್ಲಿ ಅವರ ತಂದೆ- ತಾಯಿಗಳು ಟ್ಯಾಗೋರರ ಆಸಕ್ತಿಗೆ ವಿರೋಧವಾಗಿ ಬ್ಯಾರಿಸ್ಟರ್ ಪದವಿ ಪಡೆಯಲು ಅವರ ಮೇಲೆ ಒತ್ತಡ ಹಾಕಿ ವಿದೇಶಕ್ಕೆ ಕಳುಹಿಸಿದರು. ಆದರೆ ಕವಿ ಮನಸು ಹೊಂದಿರುವ ರವೀಂದ್ರರು ಇದಕ್ಕೊಪ್ಪದೇ ಬ್ಯಾರಿಸ್ಟರ್ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಪುನಃ ಭಾರತಕ್ಕೆ ಬರಬೇಕಾಯಿತು.ಮುಂದೆ ರವೀಂದ್ರನಾಥರು ಭಾರತ ಮತ್ತು ಬಾಂಗ್ಲಾ ದೇಶ ಅಂದರೆ ಎರಡು ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ರಚಿಸಿ ಜಗತ್ಪ್ರಸಿದ್ದರಾದರು.ಅವರ ಬಹು ಆಸಕ್ತಿಯ ಕೃತಿ ಗೀತಾಂಜಲಿಗೆ ಅಂತರಾಷ್ಟೀಯ ಶ್ರೇಷ್ಠ ಪ್ರಶಸ್ತಿಯಾದ ನೊಬೆಲ್ ಪ್ರಶಸ್ತಿ ದೊರಕಿತು.ಹಾಗಾಗಿ ಪಾಲಕರಾದವರು ತಮ್ಮ ಮಕ್ಕಳ ಆಸಕ್ತಿ-ಗುರಿ-ಹಂಬಲ-ಮನೋಸ್ಥಿತಿ ಆತನ ಕಲಿಕಾ ಸಾಮರ್ಥ್ಯ ನೋಡಿ ಮುಂದಿನ ವ್ಯಾಸಂಗದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ಮಕ್ಕಳ ಮೇಲಿನ ಒತ್ತಾಯ ಪೂರ್ವಕವಾದ ನಿರ್ಧಾರದ ಶಿಕ್ಷಣ ಅದು ಮಕ್ಕಳ ಪಾಲಿಗೆ ಹೊರೆಯಾಗಿ ಅವರ ಭವಿಷ್ಯದ ಬಾಳನ್ನು ಕತ್ತಲಾಗಿಸುವುದು ಎಂದು ಹೇಳಿದರು.
ರಾಜ್ಯ ಸರಕಾರಿ ನೌಕರ ಸಂಘದ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಎಸ್ ಆರ್ ಪಾಟೀಲ ವಿಶೇಷ ಅಹ್ವಾನಿತರಾಗಿ ಮಾತನಾಡಿದರು. ಮಕ್ಕಳಲ್ಲಿರುವ ಅದ್ಭುತ ಶಕ್ತಿಯನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಣದ ಮೂಲಕ ಸಂಸ್ಕೃತಿಯ ಅರಿವು ಮೂಡುತ್ತದೆ. ಸಂಸ್ಕಾರದ ಕೊರತೆಯಿಂದ ಕ್ರೌರ್ಯ ಬೆಳೆಯುತ್ತದೆ. ಈಗ ಅಂಕ ಮತ್ತು ಅತ್ಯುನ್ನತ ಶ್ರೇಣಿ ಕಡೆಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಸದಾ ಜಾಗೃತ ಮನಸ್ಸಿನಲ್ಲಿಡುವ ಕಾರ್ಯ ನಡೆಯಬೇಕು. ಶಿಕ್ಷಣ ಮತ್ತು ಪರಿಸರ ದಿಂದ ಬದುಕುವ ಕಲೆಯ ಜಾಗೃತಿಯಾಗುತ್ತದೆ ಎಂದು ಹೇಳಿದರು. ಇನ್ನೂ ಮುಖ್ಯ ಅತಿಥಿಯಾಗಿ ಸರಕಾರಿ ನೌಕರ ಸಂಘದ ನಿರ್ದೇಶಕ ರವಿ ಗಿಣ್ಣಿ, ವಿಜಯಕುಮಾರ್ ಬೇನಾಳಮಠ ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಎಸ್ ಬಿ ಕೆಂಬೋಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಪಠ್ಯ ಶಿಕ್ಷಣ ನೀಡುತ್ತಿಲ್ಲ.ಶಿಕ್ಷಣದ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ನೀಡುವುದಲ್ಲದೆ ದೇಶ ಭಕ್ತಿಯನ್ನು ಮೈ ಮನಗಳಲ್ಲಿ ಉದ್ದೀಪನ ಮಾಡಲಾಗುತ್ತಿದೆ. ಸಂಸ್ಕಾರಯುತ ಶಿಕ್ಷಣದ ಮೂಲಕ ರಾಷ್ಟ್ರಭಕ್ತರ ನಿರ್ಮಾಣ ಸಂಸ್ಥೆಯ ಮೂಲಕ ನಡೆಯುತ್ತಿದೆ.ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಬೆಳಗಲು ಪೂರಕವಾದ ಶಿಕ್ಷಣ ನೀಡಿ ಮಕ್ಕಳನ್ನು ಬೆಳೆಸಲಾಗುತ್ತಿದೆ ಎಂದರು. ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ, ಸಾಮರ್ಥ್ಯ ಕೌಶಲ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದು ಹೇಳಿದರು.
ಶಾಲಾ - ಕಾಲೇಜು ವಿಧ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಹಾಸ್ಯ ನಾಟಕ, ಮಿಮಿ ಕ್ರಿಯೆ, ದೇಶ ಭಕ್ತಿಗೀತೆಗಳು, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನಗೈದ ಸಾಧಕರಾದ
ಶಿಕ್ಷಕ ಮಲ್ಲಿಕಾರ್ಜುನ ದೊಡ್ಡಮನಿ, ಪೋಲಿಸ್ ಪೇದೆ ರಾಜಶೇಖರ ಪಡಗನವರ,ಅಗ್ನಿಶಾಮಕ ಪೋಲಿಸ್ ಮಲ್ಲಿಕಾರ್ಜುನ ಗೋಟ್ಯಾಳ, ಪರಿಸರ ಪ್ರೇಮಿ ಸಿದ್ದಣ್ಣ ಹಿಪ್ಪರಗಿ, ಪ್ರಗತಿಪರ ರೈತ ಮಲ್ಲಿಕಾರ್ಜುನ ಮೇತ್ರಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಷ.ಬ್ರ ಶಿವಾನಂದ ಶಿವಾಚಾರ್ಯ ಕಲ್ಲಾಲಿಂಗ ಮಠ, ಕುಮಸಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಾ.ಪಂ ಸದಸ್ಯ ಪ್ರಕಾಶ ಮುಂಜಿ, ನಿಜಣ್ಣ ಕಾಳೆ, ಶಿಕ್ಷಕರಾದ ಪುಂಡಲೀಕ ಕಲ್ಮನಿ, ಆಲೇಗಾಂವ ಪವನ ಜೋಶಿ, ಸಂಗನಗೌಡ ಬಿರಾದಾರ, ರಮೇಶ್ ಕುಂಬಾರ ಜಗದೀಶ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.