ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳ ಗ್ರಾಪಂ
ವ್ಯಾಪ್ತಿಯಲ್ಲಿ ಬರುವ ಜಂಗಮುರಾಳ ಗ್ರಾಮದ ಅಂದಾಜು 200 ಮೀಟರ್ ರಸ್ತೆ ಸಮಸ್ಯಾತ್ಮಕವಾಗಿ ಪರಿಣಮಿಸಿಬೇಕು ಜಮೀನಿನ ಮಾಲಿಕರ ತಕರಾರು ಇರುವ ಕಾರಣ ರಸ್ತೆ ದುರಸ್ತಿ ಮಾಡಲಾಗುತ್ತಿಲ್ಲ ಎಂದು ಗ್ರಾಪಂ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ತಹಶೀಲ್ದಾರ್ ಅವರು ಮಧ್ಯಪ್ರವೇಶಿಸಿ ಈ ಸಮಸ್ಯೆಗಳನ್ನು ತಕರಾರು ಬಗೆಹರಿಸಿ ಗ್ರಾಮ ಸಂಪರ್ಕಿಸುವ ಈ ಪ್ರಮುಖ ರಸ್ತೆಯ 200 ಮೀಟರ್ ಭಾಗದ ದುರಸ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ರಸ್ತೆಯು ಜಂಗಮುರಾಳಕ್ಕೆ ಬರುವ ಮತ್ತು ಮಲಗಲದಿನ್ನಿ, ಅಡವಿ ಹುಲಗಬಾಳ, ಚವನಭಾವಿ, ಅಡವಿ ಸೋಮನಾಳ,ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಸಮಸ್ಯಾತ್ಮಕರಾಗಿರುವ 200 ಮೀಟರ್ ಭಾಗವು ತಗ್ಗು ದಿನ್ನೆಗಳಿಂದ ಕೂಡಿದೆ. ಚರಂಡಿ ನೀರು ರಸ್ತೆ ಮೇಲೆಯೇ ಹರಿದುಗಲೀಜು ಹೆಚ್ಚಾಗಿದೆ. ಜೀನಿಕಂಟಿಗಳು ಯಥೇಚ್ಛವಾಗಿ ಬೆಳೆದಿವೆ.ಇದರಿಂದ ಸಾರ್ವಜನಿಕರಿಗೆ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿರುಗಾಡಲು, ವಾಹನಗಳ ಮೂಲಕ ಸಂಚರಿಸಲು ಸಾಕಷ್ಟು ಪರದಾಡುವ ಸ್ಥಿತಿ ಇದೆ. ಹಲವು ಬಾರಿ ರಸ್ತೆಯ ಈ ಭಾಗ ದುರಸ್ತಿಗೊಳಿಸಿ ಅನುಕೂಲ ಕಲ್ಪಿಸಿಕೊಡುವಂತೆ ಗ್ರಾಪಂ ಪಿಡಿಓಗೆ ಮೌಖಿಕವಾಗಿ, ಲಿಖಿತವಾಗಿ ಮನವಿ ಮಾಡಿಕೊಂಡಿದ್ದೇವೆ. ಜಮೀನಿನ ಮಾಲಿಕರಿಂದ ತಕರಾರು ಇದೆ ಎಂದು ಅವರು ಹೇಳುತ್ತಿದ್ದಾರೆ.
ತಕರಾರು ಬಗೆಹರಿಸಿ ರಸ್ತೆ ದುರಸ್ತಿ ಮಾಡಿಸಿಕೊಡುವ ಜವಾಬ್ದಾರಿಯಿಂದ ಗ್ರಾಪಂನವರು ನುಣುಚಿಕೊಳ್ಳುತ್ತಿದ್ದಾರೆ. ಕೂಡಲೇ ತಾಲೂಕು ದಂಡಾಕಾರಿಗಳೂ ಆಗಿರುವ ತಹಶೀಲ್ದಾರ್ ಅವರು ಮಧ್ಯ ಪ್ರವೇಶಿಸಿ ತಕರಾರು ಬಗೆಹರಿಸಿ ಸಾರ್ವಜನಿಕರ ಬೇಡಿಕೆ ಈಡೇರಿಸಲು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಎ.ಎಚ್.ಜೈನಾಮರ, ಚಂದ್ರಶೇಖರ ಹಿರೇಮಠ, ರಮೇಶ ಪವಾರ, ಚಂದ್ರಶೇಖರ ಅಂಗಡಿ, ಡಿ.ಎಂ. ಚಿನ್ನಾಪುರ, ಮಾರುತಿ ಪವಾರ,ಬಸಪ್ಪ ಮೇಟಿ,ಅಮರಪ್ಪ ಚಿನ್ನಾಪುರ, ಸುರೇಶ, ಭೀಮಣ್ಣ ಬಿರಾದಾರ, ಮಹಾಂತೇಶಮೇಟಿ, ಎಸ್.ಆರ್ :ಹಿರೇಮಠ, ಎ.ಎಚ್.ಢವಳಗಿ,ಸೇರಿದಂತೆ ಉಪಸ್ಥಿತರಿದ್ದರು.