ಪ್ರಜಾಪ್ರಭುತ್ವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿ- ಸಂತೋಷ ಬಂಡೆ
ಇಂಡಿ: ನಮ್ಮ ಸಂವಿಧಾನವು ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕು-ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲವಾಗಿದ್ದು, ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಆಗಿದೆ ಎಂದು ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಮಂಗಳವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ‘ಭಾರತದ ಸಂವಿಧಾನ ಹೆಜ್ಜೆಗಳು’ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಸರ್ವ ಜನರ ಆಸ್ತಿ. ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಉಳಿಯಬೇಕಾದರೆ, ಸಂವಿಧಾನದ ತತ್ವಗಳನ್ನು ನಾವೆಲ್ಲರೂ ಅನುಸರಿಸಬೇಕು.
ಪ್ರಜಾಪ್ರಭುತ್ವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು,
ಪ್ರತಿಯೊಬ್ಬರಿಗೂ ಸಂವಿಧಾನ ಅಧ್ಯಯನ ಮತ್ತು ಓದು ಬಹಳ ಅಗತ್ಯ ಎಂದರು.
ಪ್ರಭಾರಿ ಪ್ರಾಚಾರ್ಯ ಪಿ ವೈ ರಜನೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಪೀಳಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಗೌರವ ನೀಡಬೇಕು. ಸಂವಿಧಾನ ನೀಡಿರುವ ಕಾನೂನುಗಳಿಗೆ ವಿಧೇಯರಾಗಿರಬೇಕು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಇಂದಿನ ಯುವಸಮೂಹಕ್ಕೆ ತಿಳಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭೀಮಾಶಂಕರ ಶಿವೂರ ಭಾರತದ ಸಂವಿಧಾನ ಪೀಠಿಕೆಯನ್ನು ಓಡಿಸಿದರು. ಉಪನ್ಯಾಸಕರಾದ ಜಿ ಎಸ್ ಭಾಗೆಳ್ಳಿ, ರಮೇಶ ಮೇತ್ರಿ, ಸಂತೋಷ ಜಾಧವ, ಪ್ರೇಮಾನಂದ ದೇಸಾಯಿ, ರವಿ ಹಾದಿಮನಿ, ಅಬ್ದುಲ್ಲಾ, ರೇಶ್ಮಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.