ಪಟೇಲರು ದೇಶದ ಏಕೀಕರಣದ ರೂವಾರಿ-ಸಂತೋಷ ಬಂಡೆ
ಇಂಡಿ: ಪಟೇಲರು ತಮ್ಮ ದೂರದರ್ಶಿತ್ವ, ದೇಶಭಕ್ತಿ, ಜಾಣತನ, ಮನವೊಲಿಸುವ ಸಾಮರ್ಥ್ಯದಿಂದ ದೇಶದ ಏಕತೆಗೆ ಶ್ರಮಿಸಿದ ಅಪ್ರತಿಮ ವ್ಯಕ್ತಿಯಾಗಿದ್ದಾರೆ. ಅವರ ತತ್ವಾದರ್ಶ ಎಲ್ಲರಿಗೂ ಮಾರ್ಗದರ್ಶಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ರಾಷ್ಟ್ರೀಯ ಏಕತಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ವಕೀಲಿ ವೃತ್ತಿ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ, ಸರಳ ಜೀವನ, ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡು, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅಸ್ಪೃಶ್ಯತೆ, ಮದ್ಯಪಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದ ಅವರು ಯುವ ಜನತೆಗೆ ಸ್ಫೂರ್ತಿಯ ಸೆಲೆ. ಅವರ ಆದರ್ಶ ಮತ್ತು ದೇಶ ಪ್ರೇಮವು ವಿದ್ಯಾರ್ಥಿಗಳಲ್ಲೂ ಬೆಳೆಯಬೇಕು ಎಂದು ಆಶಿಸಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ದಾರ್ ಪಟೇಲ್ ಅವರು ನಿಜವಾದ ರಾಜಕೀಯ ಪ್ರಜ್ಞೆ ಹೊಂದಿದ್ದ ಮುತ್ಸದ್ಧಿಯಾಗಿದ್ದರು. ಅವರ ಏಕೈಕ ಗುರಿ ದೃಢವಾದ ಮತ್ತು ಸಂಪೂರ್ಣ ಏಕೀಕೃತವಾದ ಭಾರತವನ್ನು ಕಟ್ಟುವುದಾಗಿತ್ತು ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.



















