ಬಾಯಿಯ ನೈರ್ಮಲ್ಯದ ಮಹತ್ವ & ಜಾಗೃತಿ ದಿನ
“ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”
ಇಂಡಿ ; ಆಗಸ್ಟ್ 1 ರಂದು ಪೆರಿಯೊಡಾಂಟಾಲಜಿಯ ಜನಕ, ಪ್ರಚಾರಕ, ಪ್ರವರ್ತಕ, ಭಾರತೀಯ ಪೆರಿಯೊಡಾಂಟಿಕ್ಸ್‌ನ ಮತ್ತು ಇಂಡಿಯನ್ ಸೊಸೈಟಿ ಆಫ್ ಪೆರಿಯೊಡಾಂಟಾಲಜಿಯ ಸಂಸ್ಥಾಪಕ, ಅಧ್ಯಕ್ಷರಾಗಿದ್ದ ಡಾ. ಜಿ.ಬಿ.ಶಾಂಕ್‌ವಾಲ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ದೇಶದಾದ್ಯಂತ ಮೌಖಿಕ ನೈರ್ಮಲ್ಯ, ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಅಂಗವಾಗಿ, ಹಲ್ಲಿನ/ಬಾಯಿಯ ರೋಗಗಳ ತಡೆಗಟ್ಟುವಿಕೆಯ ಬಗ್ಗೆ, ಜಾಗೃತಿ & ಉತ್ತಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಯಿಯ ನೈರ್ಮಲ್ಯದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜ್ವರ, ಕೆಮ್ಮು, ನೆಗಡಿ, ಕೈ-ಕಾಲು ನೋವು ಗಂಟಲು ನೋವು ತಲೆನೋವು ಹೀಗೆ ದೇಹದಲ್ಲಿ ಏನೇ ನೋವು ಕಾಣಿಸಿಕೊಂಡರೂ ಒಂದೆರಡು ದಿನದಲ್ಲಿ ಇದು ಕಡಿಮೆಯಾಗದೆ ಇದ್ದರೆ ಆಗ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಿರಿ,ಕಾಳಜಿ ವಹಿಸುವಿರಿ ಆದರೆ ಬಾಯಿಯ ವಿಚಾರಕ್ಕೆ ಬಂದಾಗ ಮಾತ್ರ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಬಾಯಿಯಲ್ಲಿರುವಂತಹ ಹಲ್ಲುಗಳು, ಒಸಡುಗಳು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವವು. ಆದರೆ ಹೆಚ್ಚಿನವರ ಪ್ರಕಾರ ಆಹಾರ ಜಗಿಯಲು ಮತ್ತು ಮುಖದ ಸೌಂದರ್ಯಕ್ಕಾಗಿ ಮಾತ್ರ ಹಲ್ಲುಗಳು ಅಗತ್ಯವೆಂದು ಭಾವಿಸಿರುವರು. ಆದರೆ ಹಲ್ಲುಗಳು ಹಾಗೂ ಬಾಯಿಯ ಆರೋಗ್ಯವು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬಿರುವುದು.
ಹಲ್ಲುಗಳಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇವು ತುಂಬಾ ಮುಖ್ಯ. ನಮ್ಮ ಜೀವನದ ಕೊನೆಯ ಕ್ಷಣದವರೆಗೂ ನಮಗೆ ಹಲ್ಲುಗಳು ಬೇಕಾಗುತ್ತವೆ. ಹಲ್ಲುಗಳು ಇಡೀ ಜೀವನದ ಉದ್ದಕ್ಕೂ ಇರುವುದಿಲ್ಲ ಮತ್ತು ವ್ಯದ್ಯಾಪ್ಯದಲ್ಲಿ ಉದುರುವುದು ಸಹಜ ಎಂದು ಬಹಳಷ್ಟು ಜನರು ತಿಳಿದುಕೊಂಡಿರುತ್ತಾರೆ ಆದರೆ ಸರಿಯಾದ ಆರೈಕೆ ಮತ್ತು ಆಹಾರ ಕ್ರಮದಿಂದ ಹಲ್ಲುಗಳನ್ನು ಜೀವನ ಪರ್ಯಂತ ಆರೋಗ್ಯವಾಗಿಡಬಹುದು.
ಬಾಯಿಯ ಸ್ವಚ್ಛತೆಯ ಬಗ್ಗೆ, ಹೆಚ್ಚು ಗಮನ ನೀಡದಿದ್ದರೆ ಒಸಡು ಸವೆಯುವುದು, ಜತೆಗೆ ಸೋಂಕಿನ ಅಪಾಯ ಹೆಚ್ಚುತ್ತದೆ. ಹಲ್ಲುಗಳಲ್ಲಿ ಬ್ಯಾಕ್ಷೀರಿಯಾಗಳು ವೃದ್ಧಿಯಾಗಲಾರಂಭಿಸುತ್ತವೆ.
ಇವತ್ತಿನ ಈ ದಿನದ ಪ್ರಮುಖ ಉದ್ದೇಶವೆಂದರೆ ಬಾಯಿಯ ಆರೋಗ್ಯದ ಅರಿವು ಮತ್ತು ಪ್ರಾಮುಖ್ಯತೆ ಹಾಗೂ ಬಾಯಿ ಆರೋಗ್ಯದ ಅಲಕ್ಷ ಮಾಡುವಿಕೆಯಿಂದ ಉಂಟಾಗುವ ತಾಪತ್ರಯಗಳನ್ನು ನಿವಾರಿಸವುದು.
ಬಾಯಿಯ ಆರೋಗ್ಯ ದೇಹದ ಇತರೇ ಅಂಗಗಳಲ್ಲಾಗುವ ಬದಲಾವಣೆಯ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ. ಬಾಯಿ ಆರೋಗ್ಯವಾಗಿದ್ದರೆ ಹಲವು ರೋಗಗಳಿಂದ ಮುಕ್ತರಾಗಬಹುದು. ಬಾಯಿಯ ಸೋಂಕು, ಅನೇಕ ರೋಗಗಳನ್ನು ಕಂಡು ಹಿಡಿಯುವುದಕ್ಕೆ ಸುಳಿವನ್ನು ನೀಡುತ್ತದೆ. ಆದ್ದರಿಂದ ಬಾಯಿಯ ನೈರ್ಮಲ್ಯದ ಕಡೆ ಹೆಚ್ಚು ಗಮನ ನೀಡಬೇಕು
ನಾವು ಆರೋಗ್ಯವಾಗಿರಲು ಬಾಯಿಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಆಹಾರ ಸೇವಿಸಿದ ಬಳಿಕ ಬಾಯಿ ಮುಕ್ಕಳಿಸುವದು, ನಾಲಿಗೆಯನ್ನು ಪ್ರತಿನಿತ್ಯ ಸ್ವಚ್ಛವಾಗಿಡುವ ಮೂಲಕ ನಿಮ್ಮ ಆರೋಗ್ಯದ ಅಪಾಯ ಕಡಿಮೆ ಮಾಡಬಹುದು.
ಬಾಯಿಯ ಕಳಪೆ ಆರೋಗ್ಯವು ಹೃದಯ ರೋಗಕ್ಕೆ ಕಾರಣವಾಗಬಹುದು ಮತ್ತು ಮಧುಮೇಹ ರೋಗಿಗಳ ಸಕ್ಕರೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವದು. ಅವಧಿಪೂರ್ವ ಜನನ ಅಥವಾ ಅವಧಿಪೂರ್ವ ಜನಿಸಿದ ಮಕ್ಕಳಲ್ಲಿ ತೂಕ ಕಡಿಮೆಯಾಗಿರುವುದಕ್ಕೆ ಕಾರಣವಾಗುತ್ತದೆ. ಅದಲ್ಲದೆ ಕೀಲುನೋವು ಮತ್ತು ಮೂಳೆಸವೆತಕ್ಕೂ ಕಾರಣವಾಗುತ್ತದೆ. ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವ ಕ್ಯಾನ್ಸರ್ ಮತ್ತು ಏಡ್ಸ್ ನಿಂದ ಬಳಲುತ್ತಿರುವ ರೋಗಿಗಳಲ್ಲಿ ಬಾಯಿಯ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ದರಿಂದ ಬಾಯಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಬೇಕು.
ಸೂಕ್ಷ್ಮಾಣು ಜೀವಿಗಳಿಂದ ಕೂಡಿದ ಪ್ಲಾಕ್, ಹುಳುಕು ಹಲ್ಲು ಮತ್ತು ವಸಡಿನ ಕಾಯಿಲೆಗಳ ಜನಕ ಒಂದು ಗ್ರಾಂ ಸೂಕ್ಷ್ಮಾಣು ಪ್ಯಾಕ್ ಅಂದಾಜು 1011 ಬ್ಯಾಕೀರಿಯಾಗಳನ್ನು ಹೊಂದಿರುತ್ತದೆ. ಬಾಯಿಯ ನೈರ್ಮಲ್ಯವನ್ನು ಕಾಪಾಡಿ ಕೊಳ್ಳಲು ಹಲವಾರು ಕ್ರಮಗಳಿವೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಆಹಾರ ಸೇವಿಸಿದ ಬಳಿಕ ಬಾಯಿ ಮುಕ್ಕಳಿಸುವದು, ಪ್ರೋಸಿಂಗ್, ವಸಡುಗಳನ್ನು ಮಸಾಜ್ ಮಾಡುವುದು, ನಾಲಿಗೆಯನ್ನು ಸ್ವಚ್ಛಗೊಳಿಸುವುದು, ಕನಿಷ್ಠ 6 ತಿಂಗಳಿಗೊಮ್ಮೆ ನಿಯಮಿತವಾಗಿ ದಂತ ತಪಾಸಣೆ ಇವು ಕಡ್ಡಾಯವಾಗಿವೆ. (ಹಲ್ಲು ಉಜ್ಜುವುದು, ಫೋಸಿಂಗ್, ಸ್ವಚ್ಛಗೊಳಿಸುವ ವಿಧಾನವನ್ನು ದಂತ ವೈದ್ಯರಿಂದ ಸಲಹೆ ಪಡೆದು ಕೊಳ್ಳಿ)
ನಾವು ಆರೋಗ್ಯಕರವಾಗಿರಲು ನಮಗೆ ಪೌಷ್ಠಿಕ ಆಹಾರ. ಆಂಟಿಆಕ್ಸಿಡೆಂಟ್, ವಿಟಮಿನ್ಸ್, ಮಿನರಲ್ಸ್ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಾವು ತರಕಾರಿ ಹಾಲು, ಮೊಸರು, ಹಣ್ಣುಗಳು ಮೊಟ್ಟೆ ಸೇವಿಸಬೇಕು. ಇವುಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಾಣುಗಳ ದಾಳಿಗಳಿಂದ ನಮ್ಮನ್ನು ರಕ್ಷಿಸುತ್ತವೆ
ಇದರ ಹೊರತಾಗಿ ತಂಬಾಕು: ಗುಟ್ಕಾ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಸೂಕ್ತ. ಇವುಗಳ ಮೂಲಕ ರೋಗಗಳು ಬಾರದಂತೆ ತಡೆಯಬಹುದು.
ಡಾ.ರವಿ.ವಿ.ಭತಗುಣಕಿ
ಹಿರಿಯ ದಂತ ವೈದ್ಯಾಧಿಕಾರಿಗಳು,
ತಾಲೂಕ ಸಾರ್ವಜನಿಕ ಆಸ್ಪತ್ರೆ, ಇಂಡಿ. ವಿಜಯಪುರ ಜಿಲ್ಲೆ.