ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ವಚನ ಸಾಹಿತ್ಯವು ಯುವಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ.
ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಪೂರಕವಾಗಿವೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ವಚನ ಸಾಹಿತ್ಯವು ಯುವಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ಕೋಳೂರು ಪ್ರೌಢ ಶಾಲೆಯ ಮುಖ್ಯಗುರುಗಳಾದ ರುದ್ರೇಶ ಕಿತ್ತೂರ ಹೇಳಿದರು.
ಇಲ್ಲಿನ ಆಲಮಟ್ಟಿ ರಸ್ತೆಯಲ್ಲಿರುವ ಮಾದರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಡಲಗೇರಿ ಹಾಗೂ ಕನ್ನಡ ಸಾಹಿತ್ಯ ಅಕಾಡಮಿ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, “ವಚನಗಳಲ್ಲಿ ವ್ಯಕ್ತಿತ್ವ ವಿಕಸನ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ಎಸ್.ಎಲ್.ಪಾಟೀಲ ಅವರು ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿರುವ ಮಾನವ ಸಂಘರ್ಷಕ್ಕೆ ವಚನಗಳಲ್ಲಿ ಉತ್ತರವಿದೆ ಎಂದರು. ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಬಸವರಾಜ ನಾಲತವಾಡ ಉದ್ಘಾಟಿಸಿ ವಚನಗಳು ಮಾನವನ ಜೀವನಕ್ಕೆ ದಿಕ್ಸೂಚಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ, ಹಿರಿಯ ಸಾಹಿತಿಗಳಾದ ಪ್ರೊ.ಬಿ.ಎಂ.ಹಿರೇಮಠ, ಅಬ್ದುಲ್ ರಹಮಾನ ಬಿದರಕುಂದಿ,ಎಸ್.ಎಚ್.ಪಾಟೀಲ, ಅಶೋಕ ಮಣಿ, ಬಾಪುಗೌಡ ಪಾಟೀಲ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಹದೇವ ಬಸರಕೋಡ ಮಾತನಾಡಿದರು. ಡಾ ರೇಮಣಸಿದ್ದಪ್ಪ ಅಮಣ್ಣಿ ಹಾಗೂ ಗಂಗಾಧರ ನಿಂಬಾಳ, ಸೇರಿದಂತೆ ಉಪಸ್ಥಿತರಿದ್ದರು.