ಮಳೆ ತರುವ ದೇವತೆ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ಜೋಕುಮಾರ ಸ್ವಾಮಿ
ಜೋಕುಮಾರ ಸ್ವಾಮಿ ಬಂದಾನ ಸುಖ, ಸಮೃದ್ಧಿ ತಂದಾನ
ವಿಶೇಷ ವರದಿ : ಬಸವರಾಜ ಈ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳಿಗೆ ತಮ್ಮದೇ ಆದ ವೈಶಿಷ್ಟಮಯ ಹಿನ್ನೆಲೆ ಇದೆ. ಕೆಲವು ಹಬ್ಬ-ಹರಿದಿನಗಳು ಮನರಂಜನೆಯ ಮೂಲಕ ಆಚರಿಸಲಡುತ್ತಿದ್ದ ಹಲವು ಸಮಾಜದಲ್ಲಿ ಬೇರುಬಿಟ್ಟಿರುವ ದುಗುಡ, ದೂರಮಾರನಗಳನ್ನು ಮಾಡುವಂತಹ ದೇವತೆಗಳಿಗೆ ಸಂಬಂಧಿಸಿದವಾಗಿವೆ.
ಇಂತಹ ಸಾಲಿಗೆ ಸೇರುವ ಜೋಕುಮಾರ ಸ್ವಾಮಿಯ ಆರಾಧನೆ ಇದೀಗ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ. ಕೃಷಿ ಸಮೂಹದ ದಷ್ಟಿಯಲ್ಲಿ ಜೋಕುಮಾರ ಮಳೆ-ಬೆಳೆ ತರಿಸುವ ಜತೆಗೆ ಜನತೆಯ ಬಾಧೆಗಳನ್ನು ದೂರ ಮಾಡುವ ದೇವನಾಗಿ ಮೊದಲಿನಿಂದಲೂ ಆರಾಧನೆಗೊಳಗಾಗಿದ್ದಾನೆ. ಹೀಗಾಗಿ ಜೋಕುಮಾರ ಸ್ವಾಮಿಯ ಆರಾಧನೆಗೆ ಕೃಷಿ ಸಮೂಹ ಹೆಚ್ಚಿನ ಪ್ರಾಶಸ್ತ್ರ ನೀಡುತ್ತಿದೆ.
ಭಾದ್ರಪದ ಮಾಸದಲ್ಲಿ ಜೋಕುಮಾರ ಜನಿಸುತ್ತಾನೆ ಎನ್ನುವ ನಂಬಿಕೆ ಜನಪದದಲ್ಲಿದೆ. ಇದಕ್ಕೆ ಜ್ಯೋಕ್ಯಾನ ಹುಣ್ಣಿಮೆ ಎಂದು ಕರೆಯಲಾಗುತ್ತಿದ್ದು ಪ್ರತಿ ಸಲ ಈ ಸಮಯದಲ್ಲಿ ಭಕ್ತಿ, ಶ್ರದ್ದೆ ಗೌರವ ಹಾಗೂ ನಿಷ್ಠೆಯ ಜತೆಗೆ ಸಡಗರದಿಂದ ಹುಣ್ಣಿಮೆ ಆಚರಿಸುವ ಪದ್ಧತಿ ಇಂದಿಗೂ ಈ ಭಾಗದಲ್ಲಿ ಪ್ರಸ್ತುತ ಮಳೆ ತರುವ ದೇವತೆ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ದಯಾಳು, ಫಲ ಹಾಗೂ ಬೇಡಿದ ವರ ನೀಡುವರು. ಕರುಣಾಮಯಿ, ಒಟ್ಟಾರೆ ಬಾಳಿನ ಎಲ್ಲ ಸುಖ, ಸಮದ್ದಿಗಳನ್ನು ದಯಪಾಲಿಸುವ ಭಾಗ್ಯದೇವ ಜೋಕುಮಾರ ಸ್ವಾಮಿ ಎಂಬ ಭಕ್ತಿಭಾವದ ನಂಬಿಕೆ ಸಮುದಾಯದಲ್ಲಿದೆ. ಅಂಬಿಗರು, ಕಬ್ಬಲಿಗರು, ಗಂಗೆಯ ಮಕ್ಕಳು ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡಿಸಿಕೊಂಡು ಜೋಕ್ಯಾನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ಹೇಳುತ್ತಾ ಹಳ್ಳಿಗಳ ಪ್ರತಿಯೊಂದು ಓಣಗಳಲ್ಲಿ ತಿರುಗಾಡುತ್ತಾರೆ.
ತಾಲೂಕಿನ ಚವನಭಾವಿ, ಅಡವಿ ಸೋಮನಾಳ, ಅಡವಿ ಹುಲಗಬಾಳ, ಡೊಂಕಮಡು ಕ್ಯಾತನಡೋಣಿ, ಬಸಾಪೂರ ಗ್ರಾಮದ ಪ್ರತಿಯೊಂದು ಮನೆ ಬಾಗಿಲಿಗೆ ಜೋಕುಮಾರನನ್ನು ಕರೆದೊಯ್ಯಲಾಗುತ್ತದೆ. ಜೋಕುಮಾರ ಮನೆ ಎದುರು ಪ್ರತ್ಯಕವಾದಾಗ ಅಕ್ಕಿ ಸಜ್ಜೆ ಜೋಳ ಇನ್ನಿತರ ಬಗೆಯ ಕಾಳು, ಕಡಿಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಜೋಕುಮಾರನ ಬುಟ್ಟಿ ಹೊತ್ತು ತಂದೆ ಮಹಿಳೆಯರು ಬೇವಿನ ತಪ್ಪಲು ಹಾಗೂ ನುಚ್ಚನ್ನು ಪ್ರಸಾದದ ರೂಪದಲ್ಲಿ ನೀಡಿ ತೆರಳುತ್ತಾರೆ. ಜೋಕುಮಾರ ಸ್ವಾಮಿಯದು ಬಹು ವಿಶಿಷ್ಟವಾದ ವ್ಯಕ್ತಿತ್ವ, ಅಗಲವಾದ ಮುಖ, ದಿಟ್ಟ ಕಣ್ಣುಗಳು, ಎತ್ತರದ ತಿಲಕ, ಚೂಪಾದ ಮೀಸೆ, ತೆರೆದ ಬಾಯಿ, ಹಣೆ ತುಂಬ ವಿಭೂತಿ-ಕುಂಕುಮ ಇಷ್ಟೆಲ್ಲ
ಶೋಭಾಯಮಾನವಾಗಿ ಬೇವಿನ ತಪ್ಪಲಿರುವ ಬುಟ್ಟಿಯೊಳಗೆ 7 ದಿನಗಳ ಕಾಲ ಕುಳಿತುಕೊಂಡು ಪತ್ರಿ ಗ್ರಾಮದ ಸಂಪೂರ್ಣ ಊರು ತಿರುಗುತ್ತಾನೆ. ಮೂರ್ನಾಲ್ಕು ಮಹಿಳೆಯರು ಜೋಕುಮಾರನ ಬುಟ್ಟಿಯನ್ನು ಹೊತ್ತುಕೊಂಡು ಆತನ ಸ್ತುತಿಯನ್ನು ಜಾನಪದ ಹಾಡು ಹಾಡುತ್ತಾ ಅಲೆದಾಡುತ್ತಾರೆ.
ಗ್ರಾಮೀಣ ಭಾಗದಲ್ಲಿ ಜೋಕುಮಾರನ ಬಗ್ಗೆ ಅಪಾರ ಭಕ್ತಿ ಹಾಗೂ ಗೌರವವನ್ನು ಹೊಂದಲಾಗಿದೆ. ಉಪ್ಪು ಮೆಣಸಿನಕಾಯಿ, ಹಣ, ಬಟ್ಟೆ ಬೆಣ್ಣೆ ಹುಣಸೆಹಣ್ಣು ದವಸ ಧಾನ್ಯಗಳನ್ನು ಜೋಕುಮಾರನಿಗೆ ಕಾಣಿಕೆಯಾಗಿ ನೀಡಿದರೆ ರೋಗ-ರುಜಿನ, ತಿಗಣೆ ಕಾಟ, ಕೀಮಿ-ಕೀಟಗಳ ಹಾವಳಿ ತಪ್ಪುವ ಜೊತೆಗೆ ಮಳೆ-ಬೆಳೆ ಹುಲುಸಾಗಲಿದೆ ಎಂಬ ಬಲವಾದ ನಂಬಿಕೆ ಇದೆ. ವಿಶೇಷವಾಗಿ ಮಕ್ಕಳಿಲ್ಲದವರು ಜೋಕುಮಾರನಲ್ಲಿ ಹರಕೆ.
ಹೊತ್ತರೆ ಮಕ್ಕಳ ಭಾಗ್ಯ ಪ್ರಾಪ್ತಿಯಾಗಲಿದೆ ಎಂಬ ವಿಶ್ವಾಸ ಗಾಢವಾಗಿದೆ ಜೋಕುಮಾರನ ಹುಣ್ಣಿಮೆಯನ್ನು ಆಚರಿಸುವ 7 ದಿನಗಳು ನವದಂಪತಿಗಳ ಪಾಲಿಗೆ ತುಂಬಾ ಅನಾಹುತಕಾರಿಯಾದ ದಿನಗಳು ಎಂಬ ಆತಂಕ ಇಂದಿಗೂ ಬೇರುಬಿಟ್ಟಿದೆ. ಈ ಸಮಯಕ್ಕೆ ಜೋಕ್ಯಾನ ಬೇಲಿ ಎಂದು ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದವರು ಒಟ್ಟಾಗಿ ಇರುವುದು ನಿಷಿದ್ದ ಇದಕ್ಕೆ ಹಲವಾರು ವಿವರಣೆಗಳನ್ನು ನೀಡಲಾಗುತ್ತದೆ.
ಜೋಕುಮಾರನಿಗೆ ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ ಜೋಕುಮಾರನಿಗೆ ಬೆಣ್ಣೆ ಹಚ್ಚಿ ಪೂಜಿಸುತ್ತಾರೆ. ಜೋಕುಮಾರನ ಸುತ್ತಲಿರುವ ಬೇವಿನ ಎಲೆಯನ್ನು ದನದ ಕೊಟ್ಟಿಗೆಯಲ್ಲಿ ಸುಟ್ಟು ಹೊಗೆ ಹರಡಿಸಿದರೆ ದನಕರುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಆಧುನಿಕತೆಯ ಗಾಳಿಯಿಂದಾಗಿ ಹಬ್ಬಗಳ ಆಚರಣೆಗಳಲ್ಲಿ ಶ್ರದ್ದೆ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬದ ವಿಶಿಷ್ಟ ಆಚರಣೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಪ್ರಸ್ತುತವಾಗಿದೆ.
ಯಲ್ಲಪ್ಪ ಕಾರಕೂರ ಚವನಭಾವಿ ಗ್ರಾಮಸ್ಥರು.
ಕುಂಬಾರನ ಮನೆಯಲ್ಲಿ ಮಣ್ಣಿನಿಂದ ತಯಾರಾಗುವ ಜೋಕುಮಾರನ ಮೂರ್ತಿ ವಿಶೇಷವಾಗಿರುತ್ತದೆ. ಆಗಲವಾದ ಮುಖ, ಮುಖಕ್ಕೆ ತಕ್ಕಂತೆ ಕಣ್ಣುಗಳು, ಕಿರೀಟದಂತಹ ತಲೆ, ಹುರಿ ಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ ಕುಂಕುಮದ ಪಟ್ಟಿಗಳು, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣ ಕತ್ತಿ, ತುದಿಗೆ ಬೆಣ್ಣೆಯಿಂದ ಅಲಂಕರಿಸಲ್ಪಟ್ಟ ಒನಕೆಯಂತೆ ನಿಮಿರಿ ನಿಂತ ಶಿಶ್ನ ಪುರುಷ ಜನನೇಂದ್ರಿಯ ಮೂರ್ತಿಯ ವಿಶೇಷತೆಗಳಾಗಿರುತ್ತವೆ.
ಲಕ್ಷ್ಮೀಬಾಯಿ ಈರಪ್ಪ ಕುಂಬಾರ ಚವನಭಾವಿ,