ರಾಯಚೂರು: ಮುಂಗಾರು ಬಿತ್ತನೆ ಮುಗಿದ ಬಳಿಕ ಬರುವ ಮೊದಲ ಹಬ್ಬವೇ ಕಾರ ಹುಣ್ಣಿಮೆ. ರೈತರು ಮುಂಗಾರು ಬಿತ್ತನೆ ಮಾಡಿದ ಬೆಳೆ ಉತ್ತಮವಾಗಿ ಬೆಳೆಯಲಿ ಎಂಬ ನಿರೀಕ್ಷೆಯೊಂದಿಗೆ ಹಾಗೂ ಕೃಷಿ ಚಟುವಟಿಕೆಯಲ್ಲಿ ಶ್ರಮಿಸಿದ ರಾಸುಗಳಿಗೆ ಯಾವುದೆ ದೃಷ್ಟಿ ಆಗಬಾರದು ಮತ್ತು ಶ್ರಮಿಸಿದ ರಾಸುಗಳಿಗೆ ಕೃತಜ್ಞತೆ ರೂಪದಲ್ಲಿ ರೈತರು ಖುಷಿಯಿಂದ ರಾಸುಗಳಿಗೆ ಸಿಂಗರಿಸುವ ದೃಶ್ಯ ಈ ಕಾರ ಹುಣ್ಣೆಮೆ ಆಚರಣೆಯಲ್ಲಿ ಕಂಡು ಬರುವದು ವಿಶೇಷ ವಾಗಿದೆ.
ಇನ್ನು ಸಿಂಗರಿಸಿದ ರಾಸುಗಳನ್ನು ಊರ ಅಗಸಿ ಮುಂದೆ ನಿಲ್ಲಿಸಿ ಬೇವಿನ ತೊಪ್ಪಲಿನ ಕೆಳಗೆ ರಾಸುಗಳನ್ನು ಓಡಿಸುವ ಮೂಲಕ ಕಾರ ಹುಣ್ಣೆಮೆ ಕರಿ ಹಬ್ಬವನ್ನು ಆಚರಿಸುತ್ತಾರೆ. ನಂತರ ರೈತರು ಬಾರದ ಗುಂಡು ಕಲ್ಲು ಹಾಗೂ ಸಿಂಗ್ರಾಣಿ ಕಲ್ಲುಗಳನ್ನು ಎತ್ತುವ ಸ್ಪರ್ಧೆ ಏರ್ಪಡಿಸುವ ಮೂಲಕ ಯುವಕರಲ್ಲಿ ಶಕ್ತಿ ಪ್ರದರ್ಶನ ನಡೆಸುವದು ಈ ಕಾರಹುಣ್ಣೆಮೆಯ ಮತ್ತೊಂದು ವಿಶೇಷತೆ ಆಗಿದೆ.
ಈ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಾರಹುಣ್ಣಿಮೆ ಕರಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯೇ ರಾಸುಗಳಿಗೆ, ನದಿ, ಹಳ್ಳಕೊಳ್ಳಗಳಲ್ಲಿ ಸ್ನಾನ ಮಾಡಿಸಿ, ವಿವಿಧ ಅಲಂಕಾರ ವಸ್ತುಗಳಿಂದ ಸಿಂಗಾರ ಮಾಡಿ, ಹೋಳಿಗೆ ಸೇರಿ ವಿವಿದ ವೈವಿಧ್ಯಮಯ ಖಾದ್ಯಗಳ ನೈವೇದ್ಯದೊಂದಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಕರಿ ಹರಿಯಲು ಎತ್ತುಗಳನ್ನು ತೆಗೆದುಕೊಂಡು ಹೋಗಲಾಲಾಯಿತು. ಹಲಿಗೆ ಸದ್ದಿಗೆ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು.
ಹಳ್ಳಿಗಳಲ್ಲಿ ಹೆಚ್ಚಿನ ಸಂಭ್ರಮ:
ಕಾರ ಹುಣ್ಣಿಮೆ ಹಬ್ಬವನ್ನು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ರೈತರಿಗೆ ಕೃಷಿಯಲ್ಲಿ ನೆರವಾಗುವ ಎತ್ತುಗಳಿಗೆ ವಿಶೇಷ ಸತ್ಕಾರ ಮಾಡಲಾಯಿತು. ಕೆಲ ರೈತರು ತಮ್ಮ ಪ್ರೀತಿಯ ಎತ್ತುಗಳ ಕೊಂಬುಗಳಿಗೆ ಬಲೂನ್, ವಿವಿಧ ಬಣ್ಣಗಳಿಂದ ಅಲಂಕಾರ, ಕಾಲಿಗೆ ಕಾಲ್ಗೆಜ್ಜೆ, ಹಣೆಗೆ, ಕೊರಳಿಗೆ ಹೀಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು.
ಸಂಜೆ ವೇಳೆ ಗ್ರಾಮದ ಅಗಸಿ ಬಳಿ ಕರಿ ಹರಿಯುವ ಸಂಭ್ರಮದ ಮೇಳೈಸಿತ್ತು. ಮನೆಗಳಲ್ಲಿ ಹಬ್ಬದ ಅಂಗವಾಗಿ ಹೋಳಿಗೆ ಹಾಗೂ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸಾಮೂಹಿಕ ಭೋಜನ ದೊಂದಿಗೆ ಕುಟುಂಬದವರು ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.