₹6 ಕೋಟಿ ರೂ.ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ : ಸಂಸದ ರಮೇಶ್
ವಿಜಯಪುರ : ವಿಜಯಪುರದಲ್ಲಿ ವಜ್ರ ಹನುಮಾನ ನಗರದಲ್ಲಿ ಅಂಡರ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಆ ಭಾಗದಲ್ಲಿರುವ ಕುಡಿಯುವ ನೀರಿನ ಪೈಪಲೈನ್, ಟೆಲಿಫೋನ್ ತಂತಿ ಮೊದಲಾದ ಪೂರಕ ಕಾಮಗಾರಿ ಕೈಗೊಳ್ಳಲು ಆರು ಕೋಟಿ ರೂ.ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ವಜ್ರ ಹನುಮಾನ ರೈಲ್ವೇ ಕ್ರಾಸಿಂಗ್ ಬಳಿ ಅಂಡರ ಪಾಸ್ ನಿರ್ಮಾಣ ಕಾರ್ಯ ಕೈಗೊಳ್ಳಲು ಅನೇಕ ವರ್ಷಗಳಿಂದ ಸಾರ್ವಜನಿಕರ ಬೇಡಿಕೆ ಇದೆ, ಹೀಗಾಗಿ ಆ ವಿಷಯವಾಗಿ ಪಾಲಿಕೆ, ರೈಲ್ವೇ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿರುವೆ, ರೈಲ್ವೇ ಅಂಡರ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆಲದ ಆಳದಲ್ಲಿರುವ ನೀರಿನ ಪೈಪ್ ಲೈನ್ ಜಾಲ, ಟೆಲಿಫೋನ್ ಜಾಲ ಮೊದಲಾದವುಗಳನ್ನು ಸ್ಥಳಾಂತರ ಮಾಡುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಆರು ಕೋಟಿ ರೂ. ತಗುಲುವ ಅಂದಾಜಿದೆ, ಈ ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕು, ಹೀಗಾಗಿ ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವೆ, ರಾಜ್ಯ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದರೆ ವಜ್ರಹನುಮಾನ ರೈಲ್ವೇ ಗೇಟ್ ಬಳಿ ಅಂಡರಪಾಸ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
















