ರೈಲ್ವೇ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 1.50 ಕೋಟಿ ರೂ. ಅನುದಾನ ಮಂಜೂರು
ವಿಜಯಪುರ : ವಿಜಯಪುರ ನಗರದಲ್ಲಿರುವ ಇಬ್ರಾಹಿಂಪೂರ ರೈಲ್ವೇ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 1.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಇಬ್ರಾಹಿಂಪೂರ ಭಾಗದ ಜನತೆಯ ಅನುಕೂಲಕ್ಕಾಗಿ ರೈಲ್ವೇ ನಿಲ್ದಾಣ ಇರಬೇಕು ಎನ್ನುವ ಕಾರಣಕ್ಕೆ ಆಗ ನಿಲ್ದಾಣ ಆರಂಭಿಸಲು ವಿಶೇಷ ಪ್ರಯತ್ನ ವಹಿಸಿ ಯಶಸ್ವಿಯಾಗಿದ್ದೆ, ಈ ಇಬ್ರಾಹಿಂಪೂರ ರೈಲ್ವೇ ನಿಲ್ದಾಣ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ವಿಶ್ರಾಂತ ಅಭಿಯಂತರ ಶಂಕರಗೌಡ ಪಾಟೀಲ ಸವನಹಳ್ಳಿ ವಿಶೇಷ ಪ್ರಯತ್ನ ಮಾಡಿದ್ದರು, ಈಗಲೂ ಸಹ ಇಲ್ಲಿ ಕಟ್ಟಡ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಬಾರಿ ಮನವಿ ಸಹ ನೀಡಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನಾನು ಜನತೆಯ ಅನುಕೂಲಕ್ಕಾಗಿ ಈ ಕಾರ್ಯ ಕೈಗೊಂಡಿರುವೆ.
ಇಬ್ರಾಹಿಂಪೂರ ಭಾಗದ ಪ್ರಯಾಣಿಕರು ಈ ಇಬ್ರಾಹಿಂಪೂರ ರೈಲ್ವೇ ನಿಲ್ದಾಣವನ್ನೇ ಅವಲಂಬಿಸಿದ್ದಾರೆ, ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಹೋಗಲು ಆಗುತ್ತಿದ್ದ ಸಮಯವೂ ಉಳಿತಾಯವಾಗಿದೆ, ಈಗ ಕಟ್ಟಡ ನಿರ್ಮಾಣಕ್ಕೂ ಸಹ ಪೂರಕವಾದ ಅನುದಾನ ಒಂದೂವರೆ ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.