2026 ಕ್ಕೆ ಕೇಂದ್ರ ಸರಕಾರ 8 ನೇ ವೇತನ ಜಾರಿ..! ಯಥಾವತ್ತಾಗಿ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಯಾಗುವಂತೆ ಕ್ರಮ : ರಾಜ್ಯಧ್ಯಕ್ಷ ಷಡಕ್ಷರಿ
ಇಂಡಿ: ಮುಂಬರುವ ೨೦೨೬ಕ್ಕೆ ಕೇಂದ್ರ ಸರ್ಕಾರ ೮ನೇ ವೇತನ ಆಯೋಗ ಜಾರಿಗೆ ತರಲಿದ್ದು, ಅದನ್ನು ಯಥಾವತ್ತಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಯಾಗುವಂತೆ ಕ್ರಮ ಜರುಗಿಸಲಾಗುವದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.
ಅವರು ಶುಕ್ರವಾರ ಇಂಡಿ ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಸಭಾ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಸರಕಾರದಿಂದ ೨೫ ಆದೇಶಗಳನ್ನು ಮಾಡಿಸಿದ್ದೇನೆ. ಇದನ್ನು ಅರಿತ ರಾಜ್ಯದ ನೌಕರರು ಸಂಘಟನೆಯ ಸತ್ಯ ಮತ್ತು ನ್ಯಾಯವನ್ನು ಕಂಡು ಮತ್ತೊಮ್ಮೆ ನನಗೆ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವದಾಗಿ ಹೇಳಿದರು.
ಸಂಘದ ಸಂವಿಧಾನವನ್ನು ತಿದ್ದಿ ೧೨೨ ಪುಟಗಳಿಗೆ ಹೆಚ್ಚಿಸಿದ್ದೇನೆ. ಇದರ ಅಡಿಯಲ್ಲಿ ಎಲ್ಲಾ ನೌಕರರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ. ಭ್ರಷ್ಟಾಚಾರ ಕೊನೆಗೊಳಿಸಲು ಸಂಕಲ್ಪ ತೊಡಲಾಗಿದೆ. ಸರ್ಕಾರದ ೨೫ ಕೋಟಿ ಅನುದಾನ ಬಳಸಿಕೊಂಡು ಸಂಘದ ಅಡಿಯಲ್ಲಿ ಸಭಾ ಭವನ ನಿರ್ಮಿಸಲಾಗಿದೆ ಎಂದರು.
ನೌರರಿಗಾಗಿ ಎನಪಿಎಸ್ ತೆಗೆದು ಓಪಿಎಸ್ ಜಾರಿಗೊಳಿಸುವದು, ನಗದು ರಹಿತ ಚಿಕಿತ್ಸೆ ಮಾಡುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ಇದರ ಜೊತೆಗೆ ನೌಕರ ಮರಣ ಹೊಂದಿದರೆ ಅವರ ಕುಟುಂಬಕ್ಕೆ ೧ ಕೋಟಿ ರೂ, ಬರುವಂತೆ ಇನ್ಸುರೆನ್ಸ ಮಾಡಿಸುವ ಯೋಜನೆ ಜಾರಿಗೊಳಸಲಾಗುವದು ಎಂದರು. ರಾಜ್ಯ ಸರ್ಕಾರಿ ನೌಕರರು ಬೆಂಗಳೂರಿಗೆ ಬಂದರೆ ಕೇವಲ ೧೦೦ ರೂ, ಗಳಲ್ಲಿ ಅವರು ತಂಗಲು ವ್ಯವಸ್ಥೆ ಮಾಡಲಾಗುವದು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ನಮ್ಮೆಲ್ಲ ನೌಕರ ವರ್ಗಕ್ಕೆ ಒಳಿತು ಮಾಡಲು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬೆನ್ನೆಲುಬಾಗಿ ಎಲ್ಲ ನೌಕರರು ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿ ಓಪಿಎಸ್ ಜಾರಿಗೊಳಿಸಬೇಕು, ನಗದು ರಹಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ, ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಸುರೇಶ ಶೇಡಬ್ಯಾಳ, ಸಿಂದಗಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ರಾಜ್ಯ ಕಾರ್ಯದರ್ಶಿ ಸಂಗನಬಸವ ಮಾತನಾಡಿದರು.
ಕಾರ್ಯಕ್ರಮವನ್ನು ರವಿ ಗಿಣ್ಣಿ ನಿರೂಪಿಸಿದರು. ಎಸ್.ಎಸ್.ಭಜಂತ್ರಿ ಪ್ರಾರ್ಥಿಸಿದರು.
ಇಂಡಿ: ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸನ್ಮಾನ ಸ್ವೀಕರಿಸಿ ಮಾತನಾಡಿದರು