ಶಿಕ್ಷಣ ಕ್ಷೇತ್ರಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ರವರ ಕೊಡುಗೆ ಅಪಾರ..
ಹನೂರು: ಸರ್ವ ಶ್ರೇಷ್ಠ ಚಿಂತಕರು ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಆದರ್ಶವಾದಿ ತತ್ವಜ್ಞಾನಿಗಳ ಚಿಂತನೆಯನ್ನು ಭಾರತೀಯ ಚಿಂತನೆಗೆ ಪರಿಚಿಸಿದವರು. ಅವರು ಪ್ರಸಿದ್ಧ ಶಿಕ್ಷಕರಾಗಿದ್ದರು ಅವರ ಜನ್ಮ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಎಂಆರ್ ಮಂಜುನಾಥ್ ರವರು ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆಯನ್ನು ದೀಪ ಬೆಳಗಿಸುವ ಮುಖಾಂತರ ಹಾಗೂ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಎಂ ಆರ್ ಮಂಜುನಾಥ್ ರವರು ಚಾಲನೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂಆರ್ ಮಂಜುನಾಥ ಆದರ್ಶ ಶಿಕ್ಷಕರಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ನೆನೆಯಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದವರು. ಸಮಾಜ ನಿರ್ಮಾಣ ಮಾಡುವ ಕಾರ್ಯಗಳಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆಯ – ಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರಾಗಿರುತ್ತಾರೆ. ಶಿಕ್ಷಕರನ್ನು ನಾವು ಯಾವ ಸಂದರ್ಭದಲ್ಲಿ ಮರೆಯಬಾರದು. ಶಾಲೆಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುತ್ತೇನೆ. ಪ್ರತಿ ಶಾಲೆಗಳಿಗೂ ಭೇಟಿಕೊಟ್ಟು ಶಾಲೆಗೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಯಾವುದೇ ಶಿಕ್ಷಕರ ಸಮಸ್ಯೆಗಳಿದ್ದರೂ ನಾನು ಬಗೆಹರಿಸಿಕೊಡುತ್ತೇನೆ. ನಿಮ್ಮ ಮನವಿ ಶಿಕ್ಷಕರ ಭವನ ನಿರ್ಮಾಣಕ್ಕೆ ತಹಸಿಲ್ದಾರ್ ಜೊತೆ ಮಾತನಾಡಿದ್ದು, ಆದಷ್ಟು ಬೇಗ ಕೆಲಸವನ್ನು ಮಾಡಿಕೊಡುತ್ತೇನೆ. ಎನ್‌ಪಿಎಸ್ ಬದಲು ಓಪಿಎಸ್ ಜಾರಿಗೆ ತರುವಂತೆ ಸದನದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಶಿಕ್ಷಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ 2023 ರಲ್ಲಿ ನಿವೃತ್ತಗೊಂಡಂತಹ 12 ಶಿಕ್ಷಕರುಗಳಾದ ಶ್ರೀಮತಿ ಚೆನ್ನಮ್ಮ, ಶ್ರೀಮತಿ ಸಾಕಮ್ಮ, ಶ್ರೀಮತಿ ನಿರ್ಮಲ, ಶ್ರೀಮತಿ ಸುಬರಾಣಿ, ಕುಮಾರಿ ರುಕ್ಮಿಣಿ, ಕ್ಲೆರಾ ಸೌಭಾಗ್ಯ, ಮರಿ ಸೊಸ್ಯೆ ,ರುದ್ರಸ್ವಾಮಿ, ಸುಬ್ರಮಣಿ ದಿವಂಗತ ಗಣೇಶ್ ಮುಂತಾದ ಶಿಕ್ಷಕರುಗಳಿಗೆ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ:
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ರವರು ತಾಲೂಕಿನ ಶಿಕ್ಷಕರ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ಎಂ ಆರ್ ಮಂಜುನಾಥ್ ರವರಿಗೆ ಸಲ್ಲಿಸಿದರು.
ಹನೂರು ತಾಲೂಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ ಹಾಗೂ ನಿರ್ಮಾಣ ಮಾಡಿಕೊಡಬೇಕು. ಗಿರಿಭತ್ಯನ್ನು ಜಾರಿಗೆ ತರುವಂತೆ ಮಾಡಬೇಕು. ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ ಶಿಕ್ಷಕರ ವೇತನ ಸಮಸ್ಯೆಯಾಗಿದ್ದು ಮೂರು ತಿಂಗಳು ಸತತವಾಗಿ ಸಂಬಳವಾಗಿಲ್ಲ ಇದನ್ನು ಸರಿಪಡಿಸಿ ಕೊಡಬೇಕು. ಕಳೆದ ಐದು ವರ್ಷಗಳಿಂದಲೂ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಫಲಿತಾಂಶವನ್ನು ನೀಡಿಕೊಂಡು ಬಂದಿದೆ. ಎಸ್ ಎಸ್ ಎಲ್ ಸಿ ಫಲಿತಾಂಶದ ಉತ್ತಮಿಕರಣಕ್ಕಾಗಿ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಎನ್ ಪಿ ಎಸ್ ನೌಕರರ ದನಿಯಾಗಿ ಈ ಅವೈಜ್ಞಾನಿಕ ನೀತಿಯನ್ನು ರದ್ದುಗೊಳಿಸಿ ಓ ಪಿ ಎಸ್ ಜಾರಿಗೆ ತರುವಂತೆ ಸದನದಲ್ಲಿ ಮಾತನಾಡಬೇಕು ಹಾಗೂ ಇನ್ನು ಹತ್ತಾರು ಮನವಿಗಳನ್ನು ಶಿಕ್ಷಕ ವೃಂದದವರು ಸಲ್ಲಿಸಿದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರಿಗೆ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ಜಯಗಳಿಸಿದ ಶಿಕ್ಷಕರಿಗೆ ಬಹುಮಾನವನ್ನು ಶಾಸಕ ಎಂಆರ್ ಮಂಜುನಾಥ್ ರವರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಶಿವರಾಜು, ಬಿಗ್ ಬಾಸ್ ವಿನ್ನರ್ ಪ್ರಥಮ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜೋಸೆಫ್ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮಾದೇಶ್ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಎಲ್ಲಾ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.