ಪ್ರವಾಹ ಪರಿಸ್ಥಿತಿಯಾಗದಂತೆ ಮುನ್ನಚ್ಚರಿಕೆ ಕ್ರಮ ವಹಿಸಿ : ಜಿಪಂ ಸಿಇಓ ರಿಷಿ ಆನಂದ
ವಿಜಯಪುರ ಆಗಸ್ಟ್ ೭ : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಗುರುವಾರ ತಿಕೋಟಾ & ಬಬಲೇಶ್ವರ ತಾಲೂಕಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ತಿಕೋಟಾ ಪಟ್ಟಣದ ಕೆ.ಜಿ.ಎಸ್ ಶಾಲೆಗೆ ಭೇಟಿ ನೀಡಿ, ಶಾಲೆಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದ ಅವರು, ಶಿಥಿಲಾವಸ್ಥೆಗೊಂಡಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಭೋಧನೆ ಮಾಡದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪಾಠ ಭೋಧನೆ ಮಾಡಲು ಉಸ್ತುವಾರಿ ಸಚಿವರ ನಿರ್ದೇಶನದಂತೆ ಕ್ರಮ ವಹಿಸಬೇಕ.ಶಾಲೆಯಲ್ಲಿನ ಕಂಪ್ಯೂಟರಗಳನ್ನು ವಿದ್ಯಾರ್ಥಿಗಳು ಜ್ಞಾನ ಅಭಿವೃದ್ಧಿಗೆ ಉಪಯೋಗಿಸುವಂತೆ ಪ್ರೇರಣೆ ನೀಡಬೇಕು. ಎಂದು ಅವರು ಹೇಳಿದರು.
ಮಳೆ ಬಂದ ಸಂದರ್ಭದಲ್ಲಿ ಯಾವುದೇ ಶಾಲಾ ಆವರಣದಲ್ಲಿ ಮಳೆ ನೀರು ನೀಲದಂತೆ ಅಗತ್ಯ ಮುಂಜಾಗೃತೆ ವಹಿಸಬೇಕು. ದುರಸ್ತಿಗೊಳಿಸುವುದು ಅವಶ್ಯಕವಿದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ, ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಅಡುಗೆ ಕೋಣೆಯಲ್ಲಿರಿಸಿದ ಆಹಾರ ಧಾನ್ಯಗಳನ್ನು ವೀಕ್ಷಿಸಿದ ಅವರು, ದಾಸ್ತಾನುಗಳು ಹಾಗೂ ತರಕಾರಿ ಸಾಮಗ್ರಿಗಳನ್ನು ಪ್ರತಿನಿತ್ಯ ಸ್ವಚ್ಛತೆಯಿಂದ ಕಾಯ್ದುಕೊಳ್ಳಬೇಕು ಎಂದು ಅಲ್ಲಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಂಗನವಾಡಿ ಕೇಂದ್ರಗಳ ಕಟ್ಟಡಗಳಲ್ಲಿ ಮಳೆ ಬಂದ ಸಮಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸÀದಂತೆ ಎಚ್ಚರಿಕೆ ವಹಿಸಬೇಕು ಮತ್ತು ಕಟ್ಟಡಗಳ ದುರಸ್ತಿ ಕಾರ್ಯ ಬಾಕಿಯಿದ್ದಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ತಿಕೋಟಾ ಪಟ್ಟಣದಿಂದ ತಾಜಪುರ ಹೆಚ್ ಗ್ರಾಮ ಪಂಚಾಯಿತಿಗೆ ಹೋಗುವ ರಸ್ತೆಯ ಮಧ್ಯದಲ್ಲಿ ಇರುವ ಹಳ್ಳಕ್ಕೆ ಭೇಟಿ ನೀಡಿದ ಅವರು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕೋಟ್ಯಾಳ ಗ್ರಾ.ಪಂ. ವ್ಯಾಪ್ತಿಯ ಹರನಾಳ ಗ್ರಾಮದ ಡೋಣಿ ನದಿ ಬ್ರಿಡ್ಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಇತ್ತೀಚೆಗೆ ಸುರಿದ ಮಳೆ ನೀರಿನಿಂದ ಬ್ರಿಡ್ಜ್ ಮೇಲೆ ನೀರು ಹರಿಯುತ್ತಿರುವುದರಿಂದ ಅನಾನೂಕೂಲವಾಗುತ್ತಿದ್ದು, ಪ್ರಗತಿಯಲ್ಲಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ, ರೈತರು ಮತ್ತು ಸಾರ್ವಜನಿಕರು ಓಡಾಡಲು ಮುಕ್ತ ಅವಕಾಶ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ಹಾನಿ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಒದಗಿಸಲು ಆದ್ಯತೆಯ ಮೇರೆಗೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕೋಟ್ಯಾಳ ಗ್ರಾಮದ ಹತ್ತಿರ ಇರುವ ಬ್ರಿಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮುಂಬರುವ ದಿನಗಳಲ್ಲಿ ಹೆಚ್ಚು ಮಳೆ ಬರುವ ಸಂಭವವಿರುವುದರಿAದ ರೈತ್ತರ ಬೆಳೆ ಹಾನಿಯಾಗದಂತೆ ಅದಕ್ಕೆ ಪೂರಕವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮತ್ತು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಹೊನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಪಾಠ ಬೋಧನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಪೂರೈಸಬೇಕು. ಪ್ರಗತಿ ಹಂತದಲ್ಲಿರುವ ಶೌಚಾಲಯ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಅಡುಗೆ ಕೋಣೆ ಕಾಮಗಾರಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ ಅವರು, ಇದೇ ವೇಳೆ ಬಸವಂತರಾಯ ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರತಿದಿನ ವಿದ್ಯಾರ್ಥಿಗಳು ಉತ್ತಮ ಓದು, ಉತ್ತಮ ಆಟ ಹಾಗೂ ಉತ್ತಮ ಊಟ ಈ ವಿಷಯಗಳಲ್ಲಿ ಆಸಕ್ತಿ ವಹಿಸಬೇಕು. ವಿಧ್ಯಾರ್ಥಿಗಳ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಸಸ್ಯ ಜೀವಕೋಶಗಳು ಮತ್ತು ಪ್ರಾಣಿ ಜೀವಕೋಶಗಳು ಹಾಗೂ ಇನ್ನಿತರ ಚಿತ್ರಗಳನ್ನು ಬಿಡಿಸಿದ್ದರು. ಸದರಿ ಚಿತ್ರಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಕಾಲ ಕಾಲಕ್ಕೆ ಪರೀಕ್ಷೆಗಳನ್ನು ಏರ್ಪಡಿಸಬೇಕು. ಪರೀಕ್ಷೆಯಿಂದ ವಿದ್ಯಾರ್ಥಿಗಳ ಜ್ಞಾನ ವರ್ಧನೆಗೆ ವಿನೂತನ ಚಟುವಟಿಕೆಗಳನ್ನು ಜರುಗಿಸಬೇಕು. ಈ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸುವುದು. ಪರೀಕ್ಷೆ ಕೈಗೊಂಡ ಎರಡು ದಿನಗಳಲ್ಲಿ ಉತ್ತರ ಪತ್ರಿಕೆಗಳನ್ನು ಮರಳಿಸಬೇಕು. ಏನಾದರೂ ತಪ್ಪಿದ್ದರೆ ಅದನ್ನು ತಿದ್ದಿ ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು ಎಂದು ಮುಖ್ಯ ಗುರುಗಳಿಗೆ ಸೂಚನೆ ನೀಡಿದರು. ಪ್ರೌಢಶಾಲೆಗೆ ಖಾಲಿ ಇದ್ದ ಶಿಕ್ಷಕರ ಹುದ್ದೆಗೆ ಪ್ರಸ್ತಾವನೆ ಕೂಡಲೇ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಶ್ಯಾಳ, ಸಾರವಾಡ ಹಾಗೂ ದದಾಮಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಚ ವಾಹಿನಿಗಳ ಮೂಲಕ & ಡಂಗುರ ಸಾರುವ ಮೂಲಕ ಪ್ರವಾಹದಿಂದ ಸುರಕ್ಷೀತವಾಗಿರಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಹಾಗೂ ಪ್ರವಾಹದಿಂದ ಬೆಳೆ ನಷ್ಟವಾದ ರೈತರ ಮಾಹಿತಿ ಸಂಗ್ರಹಿಸಲು ಬಬಲೇಶ್ವರ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಜೆ ಎಸ್ ಪಠಾಣ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ತಿಕೋಟಾ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತ್ರಾಯಗೌಡ ಬಿರಾದಾರ, ಬಬಲೇಶ್ವರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಸ್.ಪಠಾಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರವಿ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್ . ಎಸ್. ಮ್ಯಾಗೇರಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಜನಮಟ್ಟಿ, ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಗ್ರಾ.ಉ) ಬಸವರಾಜ ಸಂಕಗೊAಡ, ಸೆಕ್ಷನ್ ಇಂಜಿನಿಯರ್ ಪ್ರಶಾಂತ ಹೆಬ್ಬಾರೆ, ತಾಲೂಕು ಪಂಚಾಯಿತಿ ಲೆಕ್ಕಾಧಿಕಾರಿಗಳಾದ ಅನ್ವರ್ ನದಾಫ್, ಹೊನವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ಶೀಳಿನ, ತಾಜಪುರ ಹೆಚ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ ಕನಮಡಿ, ಕೋಟ್ಯಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ ಬಿರಾದಾರ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.