ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯು ಅತ್ಯಂತ ಅವಶ್ಯಕ
ವಿಜಯಪುರ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿ ಸಂಘ, ಬಿಎಲ್ಡಿಇ ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಹಮ್ಮಿಕೊಂಡ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಡಿಜಿ ಬಿರಾದಾರ ಸಸಿಗೆ ನೀರೆರುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಮಾತನಾಡಿ, ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವು ಅತ್ಯಂತ ಅರ್ಥಪೂರ್ಣವಾಗಿದೆ. ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯು ಅತ್ಯಂತ ಅವಶ್ಯಕವಾಗಿದೆ. ಸಮಾಜದಲ್ಲಿ ವಕೀಲರು ಮುಂಚೂಣಿಯಲ್ಲಿರುತ್ತಾರೆ. ಸಮಾಜದ ಮೌಲ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ಹಾಗೂ ಉನ್ನತ ಸ್ಥಾನ ಪಡೆಯುವ ಮೂಲಕ ಯಶಸ್ಸು ಸಾಧಿಸೋಣ ಎಂದು ಹೇಳಿದರು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ಪ್ರಕರಣಗಳು ವಿಲೇವಾರಿಯಾಗುತ್ತವೆ. ದಿನನಿತ್ಯ ನಾವು ಹಲವು ಪ್ರಕರಣಗಳನ್ನು ಕಾಣುತ್ತೇವೆ. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರನ್ನು ನ್ಯಾಯ ದೊರಕಿಸಲು ನಾವು ಸದಾ ಪ್ರಯತ್ನಿಸಬೇಕು. ಅನ್ಯಾಕ್ಕೊಳಗಾದವರನ್ನು ನ್ಯಾಯ ಒದಗಿಸುವುದರಲ್ಲಿಯೇ ನಾವು ಸಂತೃಪ್ತಿ ಭಾವನೆ ಹೊಂದಬೇಕು. ಈ ನಿಟ್ಟಿನಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸ್ಪಷ್ಟ ವಿಚಾರಗಳನ್ನು ಹೊಂದಬೇಕು. ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಕೌಶಲ್ಯತೆಗಳನ್ನು ಅಳವಡಿಸಿಕೊಂಡು ಶ್ರದ್ಧೆಯಿಂದ ಕಾಯನಿರ್ವಹಿಸಿ ನ್ಯಾಯ ಒದಗಿಸಲು ಸಹಾಯಕ್ಕೆ ಮುಂದಾಗಬೇಕು. ಸತತ ಅಧ್ಯಯನಶೀಲರಾಗಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಕ್ತದಾನಶಿಬಿರ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಜರುಗಿತು. ಪ್ರಾಸ್ತಾವಿಕವಾಗಿ ಎಸ್ ಎಸ್ ಛಾಯಾಗೋಳ ಮಾತನಾಡಿದರು.ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಚೂರಿ ಅವರು ಸ್ವಾಗತಿಸಿದರು.


















