ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ
ವಿಜಯಪುರ : ಚುನಾವಣೆ ಸಂದರ್ಭದಲ್ಲಿ ಬಸವನಬಾಗೇವಾಡಿ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅದರ ಭಾಗವಾಗಿ ಇದೀಗ ನಿಡಗುಂದಿ ಪಟ್ಟಣದಲ್ಲಿ ಬಡವರ ಹಸಿವು ನೀಗುವ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್, ಸಿದ್ಧರ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಲೋಕಾರ್ಪಣೆ, ಶತಮಾನದ ಶಾಲೆ ಎಂದೇ ಅಭಿದಾನ ಹೊಂದಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಠಡಿಗಳ ದುರಸ್ತಿ ಕಾಮಗಾರಿ ಹಾಗೂ ಶ್ರೀ ಮುದ್ದೇಶ್ವರಪ್ರಭು ದೇವಸ್ಥಾನದ ಬಳಿ ರಂಗ ಮಂಟಪ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್ ಮೂಲಕ ನಮ್ಮ ಸರ್ಕಾರ ಕಡಿಮೆ ದರದಲ್ಲಿ ಗುಣಮಟ್ಟದ ಉಪಹಾರ, ಊಟದ ಸೌಲಭ್ಯ ಕಲ್ಪಿಸುವ ಮೂಲಕ ಬಡವರ ಹಸಿವು ನೀಗಿಸುವ ಜನಪರ ಹಾಗೂ ಪ್ರಾಮಾಣಿಕ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟಿನ್ ಪೌರಾಡಳಿತ ಇಲಾಖೆ, ಸ್ಥಳೀಯ ಆಡಳಿತದ ನೆರವಿನಿಂದ 1.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಹಸಿದವರ ಹೊಟ್ಟೆ ತುಂಬಲಿದೆ ಎಂದರು.
ಪಟ್ಟಣದಲ್ಲಿ ಶತಮಾನದ ಶಾಲೆ ಎಂದೇ ಕರೆಸಿಕೊಳ್ಳುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಟ್ಟಡದ ದುರಸ್ತಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಶತಮಾನದ ಶಾಲೆಯ ಕಾಯಕಲ್ಪಕ್ಕೆ ಮುಂದಾಗಿರುವುದಾಗಿ ಹೇಳಿದರು.
ಇನ್ನು ಪಟ್ಟಣದಲ್ಲಿ ಶ್ರೀ ಮುದ್ದೇಶ್ವರಪ್ರಭು ದೇವಸ್ಥಾನದ ಬಳಿ ರಂಗ ಮಂಟಪ ನಿರ್ಮಾಣ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಭಾಗದ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೇ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಕಾರಿ ಆಗಲಿದೆ. ಸದರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಆರ್ಥಿಕ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಶತಮಾನ ಕಂಡಿರುವ ಶಾಲೆಯಾಗಿರುವುದರಿಂದ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ತಾವು ವಿದ್ಯೆ ಪಡೆದ ಶಾಲೆಯನ್ನು ಮೂಲ ರೂಪದಲ್ಲಿ ನವಿಕರಿಸುವ ಕುರಿತು ನನ್ನ ಗಮನಕ್ಕೆ ತಂದಿದ್ದರು. ಹೀಗಾಗಿ ಸ್ಥಳೀಯರ ಶೈಕ್ಷಣಿಕ ಆಸ್ಮಿತೆಯಾಗಿರುವ ಶಾಲೆ ಪುನರುತ್ಥಾನಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಸಮಾರಂಭದಲ್ಲಿ ಪಟ್ಟಣದ ಸಿದ್ದಣ್ಣ ನಾಗಠಾಣ, ಸಂಗಮೇಶ ಕೆಂಭಾವಿ, ಶೇಖರ ದೊಡಮನಿ ಸೇರಿದಂತೆ ನಿಡಗುಂದಿ ಪಟ್ಟಣದ ಪಂಚಾಯಿತಿ ಸದಸ್ಯರು ಮತ್ತು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿಡಗುಂದಿ : ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಗೆ ಜವಳಿ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.