ಇಂಡಿ : 12ನೇ ಶತಮಾನದಲ್ಲಿರುವ ಬಹುತೇಕ ಶರಣರು ಹೇಳಿದಂತೆ, ವಚನಗಳಲ್ಲಿ ನುಡಿದಂತೆ ನಡೆದು ಶರಣರಾಗಿ ಇತಿಹಾಸದ ಪುಟಗಳಲ್ಲಿ ಸೇರಿ ಅಮರರಾಗಿದ್ದಾರೆ. ಅಂಥ ಶರಣರಲ್ಲಿ ಮಾರಯ್ಯ ಲಕ್ಕಮ್ಮ ಆದರ್ಶ ದಂಪತಿ ಶರಣರು ಸೇರ್ಪಡೆಯಾಗಿದ್ದಾರೆ ಎಂದು ಕರ್ನಾಟಕ ಟೀಚರ್ಸ್ ಬಿ.ಇ.ಡ್ ಕಾಲೇಜಿನ ಪ್ರಾಚಾರ್ಯ ಡಾ. ಅರ್. ಜಿ ಚಿಕ್ಕಮಠ ಹೇಳಿದರು. ಪಟ್ಟಣದ ಜಿ ಆರ್ ಗಾಂಧಿ ಕಲಾ ಮತ್ತು ವೈ ಎ ಪಾಟೀಲ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ,ಯುವ ಘಟಕ ಹಾಗೂ ಈ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ದತ್ತಿ ದಾನಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ. ಜೆ ಪಾಟೀಲರ ತಂದೆಯವರಾದ ಬೆನಕನಹಳ್ಳಿ ಗ್ರಾಮದ ಲಿಂ. ಜಾನನಗೌಡ ಕಲ್ಲನಗೌಡ ಪಾಟೀಲರ ಸ್ಮರಣಾರ್ಥವಾಗಿ ಏರ್ಪಡಿಸಿದ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ “ಆಸೆಯ ಜಯಿಸಿದ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ” ಈ ವಿಷಯದ ಕುರಿತು ಉಪನ್ಯಾಸ ನೀಡಿಮಾತನಾಡಿದರು. ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳು ಬೇಕು ಎನ್ನುವುದಕ್ಕೆ ತಿಲಾಂಜಲಿ ನೀಡಿ, ಸಾಕು ಎನ್ನುವುದಕ್ಕೆ ಆದ್ಯತೆ ನೀಡಿ ಆದರ್ಶ ಶರಣಾಗಿ ಬಾಳಿ ಬದುಕಿದರು. ಗಂಡು-ಹೆಣ್ಣು ಸಮಾನರು ಸಹಿಷ್ಣುತೆಯಿಂದ ಬಾಳಬೇಕು. ಕಾಯಕ ಸಂಸಾರದಲ್ಲಿ ಸಮರಸ ಇರಬೇಕು ಎಂದು ಹೇಳಿದರು. ಆಸೆ ಎಂಬುದು ಅರಸರಿಗಲ್ಲದೆ ಈಸಕ್ಕಿ ನಿಮಗೇಕೆ ಎಂದು ಮಾರಯ್ಯನು ತಂದ ಅಕ್ಕಿಯನ್ನು ಮರಳಿಸಿ ಆಸೆಯನ್ನು ಜಯಿಸಿದ ಶರಣರಾಗಿ ಹೊರಹೊಮ್ಮಿದರು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಚಾರ್ಯ ಪ್ರೊ. ಐ.ಬಿ ಸುರಪುರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಹೇಳಿದ ವಚನಗಳ ಸಾರವನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಆರ್.ವಿ. ಪಾಟೀಲ ಪ್ರಸ್ತಾವಿಕವಾಗಿ ಹಾಗೂ ಯುವ ಘಟಕದ ಅಧ್ಯಕ್ಷ ಎಸ್ ಐ ಸೂಗೂರು ದತ್ತಿ ಸ್ಮರಣೆಯಲ್ಲಿ ಲಿಂ. ಜಾನನಗೌಡ ಕಲ್ಲನಗೌಡ ಪಾಟೀಲರ ಕುರಿತು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ ಜಾಧವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗ ಗುರು ಬಿ.ಎಸ್ ಪಾಟೀಲರು ನಿರೂಪಿಸಿದರು. ಉಪನ್ಯಾಸಕ ಸಣ್ಣಕ್ಕಿ ಸ್ವಾಗತಿಸಿದರು. ಎಚ್.ಎಸ್
ಏಳೆಗಾಂವ ಶಿಕ್ಷಕರು ಪ್ರಾರ್ಥಿಸಿದರು.