ಆಧುನಿಕ ಬದುಕಿಗೆ ಸೇವಾಲಾಲರ ತತ್ವಾದರ್ಶ ಮಾರ್ಗದರ್ಶಿ – ಸಂತೋಷ ಬಂಡೆ
ಇಂಡಿ: ಸಂತ ಸೇವಾಲಾಲರು ಸತ್ಯ, ಅಹಿಂಸೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಾ, ಜಾತಿ, ಧರ್ಮದಿಂದ ಬೇಧ ಭಾವ ಮಾಡದೇ ಎಲ್ಲರೂ ಸಮಾನರು ಎಂಬ ವಿಶ್ವ ಮಾನವ ಸಂದೇಶ ಸಾರಿದ ಜಗತ್ತಿನ ಶ್ರೇಷ್ಠರಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಂತ ಸೇವಾಲಾಲರು ಸಮಾಜದ ಏಳಿಗೆಗೆ ನೀಡಿದ ಕೊಡುಗೆ ಅಪಾರ.ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆಯು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವಾದರ್ಶಗಳು ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿದ್ದು, ಅವನ್ನು ಅನುಪಾಲಿಸಿಕೊಂಡು ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಸ್ವಂತ ಜೀವನಕ್ಕಾಗಿ ಆಸ್ತಿ ಮಾಡದೇ,ಬಡವರಿಗಾಗಿಯೇ ಶ್ರಮಿಸಿ ನಿಸ್ವಾರ್ಥ ಸೇವೆ ಮಾಡಿದ ದಾರ್ಶನಿಕ ಸಂತ ಸೇವಾಲಾಲರು ಕಾಲಜ್ಞಾನಿಯೂ ಆಗಿದ್ದರು. ತನ್ನ ಹಿತಕ್ಕಾಗಿ ಜೀವನ ನಡೆಸಲಿಲ್ಲ. ಪರರ ಕಷ್ಟಗಳಿಗೆ ಸ್ಪಂದಿಸುತ್ತ ಸದಾ ಅವರ ಸೇವೆಯಲ್ಲಿತೊಡಗಿ, ಜನರ ಜೀವನಕ್ಕೆ ಉತ್ತೇಜನ ನೀಡುತ್ತಾ ಬಂದ ಮಹಾನ್ ನಾಯಕರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎ ಎಂ ಬೆಂದ್ರೇಕರ ಮಾತನಾಡಿ, ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಬೇಕು ಎಂಬ ಸೇವಾಲಾಲರ ಮಾತು ಇಂದಿಗೂ ಪ್ರಸ್ತುತವಾಗಿದೆ. ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಪಿ ಪೂಜಾರಿ,
ಡಿಎಡ್ ಪ್ರಶಿಕ್ಷಾಣಾರ್ಥಿ ತೈಸಿನ್ ನದಾಫ್ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಫೋಟೋ: ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸಂತ ಸೇವಾಲಾಲರ ಜಯಂತಿ ಆಚರಣೆಗೆ ಚಾಲನೆ ನೀಡಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.